ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಇತ್ತೀಚೆಗೆ ಉಂಟಾದ ಕಾಲ್ತುಳಿತದಲ್ಲಿ ಸುಮಾರು 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಆಡಳಿತವು ಹೇಳಿದೆ. ನಿಜವಾಗಿ ಇನ್ನೂ ಅಧಿಕ ಮಂದಿ ಮೃತಪಟ್ಟಿದ್ದಾರೆ, ಆದರೆ ನೈಜ ಮೃತರ ಸಂಖ್ಯೆಯನ್ನು ಮರೆಮಾಚಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಆರೋಪಗಳ ನಡುವೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾ ಕುಂಭಮೇಳವನ್ನು ‘ಮೃತ್ಯು ಕುಂಭ’ ಎಂದು ಕರೆದಿದ್ದಾರೆ.
ದೇಶದಲ್ಲಿ ಇತ್ತೀಚೆಗೆ ಕಾಲ್ತುಳಿತ ಪ್ರಕರಣಗಳು ಅಧಿಕವಾಗಿದೆ. ಕಳೆದ ತಿಂಗಳು ಮಹಾ ಕುಂಭಮೇಳದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಸುಮಾರು 30 ಮಂದಿ ಸಾವನ್ನಪ್ಪಿ, 60 ಭಕ್ತರು ಗಾಯಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಇನ್ನು ಇತ್ತೀಚೆಗೆ ದೆಹಲಿ ರೈಲ್ವೇ ನಿಲ್ದಾಣದಲ್ಲಿ ಜನದಟ್ಟಣೆ ಉಂಟಾಗಿ 18 ಮಂದಿ ಮೃತಪಟ್ಟಿದ್ದಾರೆ. ಇವೆಲ್ಲವುದರ ನಡುವೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಗಂಗಾ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ, ಬ್ಯಾಕ್ಟೀರಿಯಾಮಯ: ಮಾಲಿನ್ಯ ನಿಯಂತ್ರಣ ಮಂಡಳಿ
“ಮಹಾ ಕುಂಭಮೇಳವು ‘ಮೃತ್ಯು ಕುಂಭ’ವಾಗಿ ಬದಲಾಗಿದೆ. ಅವರು (ಬಿಜೆಪಿ ಸರ್ಕಾರ) ಮೃತರ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೂರಾರು ಮೃತದೇಹಗಳನ್ನು ಅಡಗಿಸಿಟ್ಟಿದ್ದಾರೆ” ಎಂದು ಪಶ್ಚಿಮ ಬಂಗಾಳ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಬ್ಯಾನರ್ಜಿ ಆರೋಪಿಸಿದ್ದಾರೆ.
“ನಾನು ಮಹಾ ಕುಂಭಮೇಳಕ್ಕೆ, ಗಂಗಾ ಮಾತೆಗೆ ಗೌರವ ನೀಡುತ್ತೇನೆ. ಆದರೆ ಕುಂಭಮೇಳ ಆಯೋಜಿಸುವಾಗ ಸರಿಯಾದ ಯೋಜನೆ ರೂಪಿಸಲಾಗಿಲ್ಲ. ಈವರೆಗೆ ಎಷ್ಟು ಜನರನ್ನು ಪತ್ತೆಹಚ್ಚಲಾಗಿದೆ? ಶ್ರೀಮಂತರಿಗೆ ವಿಐಪಿ ಸ್ಥಾನ ನೀಡಲಾಗುತ್ತದೆ. ಒಂದು ಲಕ್ಷ ರೂಪಾಯಿವರೆಗೆ ಪಾವತಿ ಮಾಡಿ ಟೆಂಟ್ (ವಸತಿ) ಪಡೆಯುವ ವ್ಯವಸ್ಥೆಯಿದೆ. ಆದರೆ ಬಡವರಿಗೆ ಯಾವುದೇ ವ್ಯವಸ್ಥೆಯಿಲ್ಲ. ಮೇಳಗಳಲ್ಲಿ ಕಾಲ್ತುಳಿತ ನಡೆಯುವುದು ಸಾಮಾನ್ಯ. ಆದರೆ ಅದನ್ನು ತಡೆಯಲು ವ್ಯವಸ್ಥೆಯನ್ನು ಮೊದಲೇ ಮಾಡಿಕೊಳ್ಳಬೇಕು. ನೀವು ಯಾವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಿರಿ” ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
“ಮಹಾ ಕುಂಭಮೇಳದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ. ಆದರೆ ಉತ್ತರ ಪ್ರದೇಶ ಸರ್ಕಾರ ಎಷ್ಟು ಪರಿಹಾರವನ್ನು ನೀಡಿದೆ? ಪಶ್ಚಿಮ ಬಂಗಾಳ ಮೂಲದವರೂ ಕೂಡಾ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದು, ಅವರ ಮರಣೋತ್ತರ ಪರೀಕ್ಷೆಯನ್ನೂ ಕೂಡಾ ಮಾಡಲಾಗಿಲ್ಲ. ನಮ್ಮ ಸರ್ಕಾರವೇ ಮರಣೋತ್ತರ ಪರೀಕ್ಷೆಯನ್ನು ಮಾಡಿಸಿದೆ. ನಮಗೆ ಸಾವಿಗೆ ನಿಖರವಾದ ಕಾರಣ ತಿಳಿದಿಲ್ಲದಿದ್ದರೆ, ಸರ್ಕಾರ ಪರಿಹಾರ ನೀಡುವುದು ಹೇಗೆ? ಉತ್ತರ ಪ್ರದೇಶ ಸರ್ಕಾರ ಸಾವಿಗೆ ಕಾರಣವನ್ನೂ ಉಲ್ಲೇಖಿಸಿಲ್ಲ” ಎಂದು ಆರೋಪಿಸಿದ್ದಾರೆ.
