ಮಹಾ ಕುಂಭಮೇಳ ಇಂದು (ಫೆ.26) ಅಂತ್ಯವಾಗಲಿದೆ. ಜನವರಿ 13 ರಿಂದ ಆರಂಭವಾಗಿದ್ದ ಧಾರ್ಮಿಕ ಹಬ್ಬ ಶಿವರಾತ್ರಿಯೊಂದಿಗೆ ಮುಕ್ತಾಯವಾಗಲಿದೆ.
ಈವರೆಗೂ ಕೋಟಿಗಟ್ಟಲೇ ಜನ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳ ಹಲವು ಅಡೆತಡೆಗಳ ನಡುವೆ, ಕಾಲ್ತುಳಿತ ಹಾಗೂ ಅಪಘಾತಗಳ ಕಹಿ ನೆನಪಿನೊಂದಿಗೆ ಮುಕ್ತಾಯವಾಗುತ್ತಿದೆ.
45 ದಿನಗಳ ಕಾಲ ನಡೆದ ಮಹಾ ಕುಂಭಮೇಳ ಪ್ರಪಂಚದಲ್ಲೇ ಇದೇ ಮೊದಲ ಬಾರಿಗೆ ಇಷ್ಟು ಜನ ಸೇರಿ ಹೊಸ ದಾಖಲೆ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ. ಜೊತೆಗೆ ಶತಮಾನದಲ್ಲೇ ಅತ್ಯಂತ ಅಪರೂಪದ ಧಾರ್ಮಿಕ ಘಟನೆಯಾಗಿದ್ದು, ಮಹಾಶಿವರಾತ್ರಿಯ ಅಂತಿಮ ಪುಣ್ಯ ಸ್ನಾನ ನಡೆಯುತ್ತಿದೆ.
ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಹಾಶಿವರಾತ್ರಿಯ ಶುಭದಿನವಾದ ಬುಧವಾರ ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡಲಿದ್ದಾರೆ. ಮಕರ ರಾಶಿಯಲ್ಲಿ ಚಂದ್ರನ ಸಂಚಾರದೊಂದಿಗೆ ಶಿವ ಭಕ್ತರು ಪರಿಘ ಯೋಗದ ಸಮಯದಲ್ಲಿ ಸಂಗಮದಲ್ಲಿ ಸ್ನಾನ ಮಾಡುವ ಮೂಲಕ ಕೊನೆಯ ಸ್ನಾನ ಮಹೋತ್ಸವದ ಪುಣ್ಯ ಗಳಿಸುತ್ತಿದ್ದಾರೆ.
ಇಂದು ಬೆಳಗ್ಗೆ 11:08ಕ್ಕೆ ಪ್ರಾರಂಭವಾಗಿ ಗುರುವಾರ ಬೆಳಗ್ಗೆ 08:54ರವರೆಗೆ ಇರಲಿದೆ. ಮಹಾಶಿವರಾತ್ರಿಯಂದು ಸ್ನಾನ ಮಾಡಲು ಶುಭ ಸಮಯ ನಾಳೆ ಬೆಳಗ್ಗೆ 9 ಗಂಟೆಯವರೆಗೆ ಇರಲಿದೆ. ಇಂದು ಮಹಾಶಿವರಾತ್ರಿಯ ದಿನದಂದು ಬ್ರಹ್ಮ ಮುಹೂರ್ತವು ಬೆಳಗ್ಗೆ 05:09ಕ್ಕೆ ಪ್ರಾರಂಭವಾಗಿದ್ದು ಸಂಜೆ 5:59ಕ್ಕೆ ಕೊನೆಗೊಳ್ಳುತ್ತದೆ.