ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ರಾಜ್ನ ಹಲವು ಕಡೆಗಳಲ್ಲಿ ನದಿ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ. ಗಂಗಾ ನದಿಯಲ್ಲಿ ಫೀಕಲ್ ಕೋಲಿಫಾರ್ಮ್ (faecal coliform) ಬ್ಯಾಕ್ಟೀರಿಯಾ ಅಧಿಕವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಮೂಲಕ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ತಿಳಿಸಿದೆ.
ವಿವಿಧ ಸ್ಥಳಗಳಲ್ಲಿ ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಅಧಿಕವಾಗಿರುವುದರಿಂದ ಈ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ ಎಂದು ವರದಿ ಹೇಳಿದೆ.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳ ಕಾಲ್ತುಳಿತ | ಈವರೆಗೆ ಮೃತರ ನಿಖರ ಸಂಖ್ಯೆ ಯಾಕೆ ಬಹಿರಂಗಪಡಿಸಿಲ್ಲ: ಅಖಿಲೇಶ್ ಪ್ರಶ್ನೆ
ಕೊಳಚೆಯನ್ನು ಪ್ರಯಾಗ್ರಾಜ್ನಲ್ಲಿ ಗಂಗಾ ಮತ್ತು ಯಮುನಾ ನದಿಗೆ ಬಿಡುವುದನ್ನು ತಡೆಯಲು ಒತ್ತಾಯಿಸಿ ಸಲ್ಲಿಸಲಾದ ಅರ್ಜಿಯನ್ನು ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ, ನ್ಯಾಯಿಕ ಸದಸ್ಯ ಸುದೀರ್ ಅಗರ್ವಾಲ್ ಮತ್ತು ತಜ್ಞ ಎ ಸೆಂಥಿಲ್ ವೇಲ್ ಅವರ ಪೀಠವು ಆಲಿಸಿದೆ. ನದಿಯಲ್ಲಿ ಕೊಳಚೆ ನೀರು ಬಿಡಲಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದ ವರದಿಯನ್ನು ಸಿಪಿಸಿಬಿ ಫೆಬ್ರವರಿ 3ರಂದು ಸಲ್ಲಿಸಿದೆ ಎಂಬುದನ್ನು ಪೀಠ ಗಮನಿಸಿದೆ.
“ಪ್ರಯಾಗ್ರಾಜ್ನಲ್ಲಿ ಹಲವು ಸ್ಥಳಗಳಲ್ಲಿ ನದಿ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ. ಮಹಾ ಕುಂಭಮೇಳದ ಸಂದರ್ಭದಲ್ಲಿ, ಪವಿತ್ರ ಸ್ನಾನದ ಸಂದರ್ಭದಲ್ಲಿ ಹಲವು ಮಂದಿ ಪ್ರಯಾಗ್ರಾಜ್ನಲ್ಲಿ ಸ್ನಾನ ಮಾಡಿದ್ದಾರೆ. ಇದರಿಂದಾಗಿ ಫೀಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇನ್ನಷ್ಟು ಹೆಚ್ಚಾಗುತ್ತದೆ” ಎಂದು ವರದಿ ಹೇಳಿದೆ.
ಇನ್ನು ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರ ಮಂಡಳಿಗೆ (ಯುಪಿಪಿಸಿಬಿ) ತಿಳಿಸಿದ್ದರೂ ಯಾವುದೇ ಅಗತ್ಯ ಕ್ರಮವನ್ನು ಕೈಗೊಂಡಿಲ್ಲ. ಬದಲಾಗಿ ಕೆಲವು ಪ್ರದೇಶಗಳ ನೀರಿನ ಪರೀಕ್ಷೆ ನಡೆಸಿ ಪತ್ರ ಬರೆದಿದೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಾ ಕುಂಭಮೇಳವೆಂಬ ಸನಾತನ ಗರ್ವ, ಕಾಲ್ತುಳಿತದ ಪರ್ವ
“2025ರ ಜನವರಿ 28ರಂದು ಯುಪಿಪಿಸಿಬಿ ಕಳುಹಿಸಿದ ಪತ್ರದಲ್ಲಿರುವ ದಾಖಲೆಗಳಲ್ಲಿಯೂ ಕೆಲವು ಕಡೆಗಳಲ್ಲಿ ಬ್ಯಾಕ್ಟೀರಿಯಾ ಅಧಿಕವಾಗಿರುವುದು ಕಂಡುಬಂದಿದೆ” ಎಂದು ಪೀಠ ಹೇಳಿದೆ. ಇವೆಲ್ಲವುದರ ನಡುವೆ 1.5 ಲಕ್ಷ ಶೌಚಾಲಯದ ನೀರನ್ನು ನದಿಗೆ ಬಿಡಲಾಗುತ್ತಿಲ್ಲ ಎಂದು ಮಹಾ ಕುಂಭಮೇಳ ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ನದಿ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ ಎಂಬ ವರದಿ ಬಹಿರಂಗವಾಗುವ ಮುನ್ನವೇ ನಡೆದಿರುವ ಮಹಾ ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ. ಕಲುಷಿತವಾದ ನೀರಿನಿಂದ ಜನರಿಗೆ ಚರ್ಮ ರೋಗಗಳು ಕಾಡಬಹುದು ಎಂದು ಹಲವು ತಜ್ಞರ ಅಭಿಪ್ರಾಯವಾಗಿದೆ.
