ಕುಂಭ ಮೇಳದಲ್ಲಿ ಮುಸ್ಲಿಂ ಸಮುದಾಯ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಿರುವ ಹೊರತಾಗಿಯೂ ಆ ಸಮುದಾಯ ಮಾನವೀಯತೆ ಮತ್ತು ಕೋಮು ಸೌಹಾರ್ದತೆಯ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದಕ್ಕೆ ಪ್ರಯಾಗ್‌ರಾಜ್ ಹಾಗೂ ಅಲಹಾಬಾದ್‌ನ ಎರಡು ಘಟನೆಗಳು ಸಾಕ್ಷಿಯಾಗಿದೆ.
ಪ್ರಯಾಗ್‌ರಾಜ್‌ನಲ್ಲಿರುವ ಮುಸ್ಲಿಂ ಸಮುದಾಯವು ಕುಂಭ ಮೇಳದಲ್ಲಿ ಗಾಯಗೊಂಡ ಭಕ್ತರಿಗೆ ಸಹಾಯ ಮಾಡಲು ಮುಂದಾಗಿದೆ. ಮೌನಿ ಅಮವಾಸ್ಯೆಯಂದು ಕಾಲ್ತುಳಿತದ ನಂತರ ಗಾಯಗೊಂಡ, ತೊಂದರೆಗೊಳಗಾದ ಯಾತ್ರಾರ್ಥಿಗಳಿಗೆ ಆಹಾರ, ವಸತಿ ಮತ್ತು ವೈದ್ಯಕೀಯ ಸಹಾಯವನ್ನು ಒದಗಿಸುತ್ತಿದೆ. ಅಗತ್ಯವಿರುವವರಿಗೆ ನೆರವು ನೀಡಲು ಅವರು ತಮ್ಮ ಮನೆಗಳು, ಮಸೀದಿಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ತೆರೆದಿದ್ದಾರೆ.
ಗಾಯಗೊಂಡ ಭಕ್ತರಿಗೆ ಆಹಾರ, ನೀರು, ಬಟ್ಟೆ, ಔಷಧಿ, ಮತ್ತು ಆಶ್ರಯವನ್ನು ನೀಡುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳು ಪ್ರಸಾರವಾಗುತ್ತಿವೆ.
“ನಂಬಿಕೆ ಮತ್ತು ಮಾನವೀಯತೆಗೆ ಎಂದಿಗೂ ರಾಜಿ ಮಾಡಿಕೊಳ್ಳಬಾರದು. ಭಕ್ತರು ನಮ್ಮ ನಗರದ ಅತಿಥಿಗಳು ಮತ್ತು ಅವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ” ಎಂದು ಸಮುದಾಯದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅಲಹಾಬಾದ್‌ನ ಇನ್ನೊಂದು ಘಟನೆಯಲ್ಲಿ ಮುಸ್ಲಿಂ ಸಮುದಾಯದವರು ಕುಂಭಮೇಳಕ್ಕೆ ಆಗಮಿಸುವ ಭಕ್ತರಿಗೆ ಆಶ್ರಯ ಸೇರಿದಂತೆ ಹಲವು ರೀತಿಯ ನೆರವು ನೀಡಿದ್ದಾರೆ. ಮುಸ್ಲಿಂ ಸಮುದಾಯ ನೆರವು ನೀಡಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.