ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಬದಲಾವಣೆಯ ಅಲೆ ಬೀಸುತ್ತಿದೆ. ಆ ರಾಜ್ಯದ ಸುಮಾರು 7,000ಕ್ಕೂ ಹೆಚ್ಚು ಗ್ರಾಮಗಳು ವಿಧವೆಯ ವಿರುದ್ದದ ತಾರತಮ್ಯ ಮತ್ತು ಅವರ ಮೇಲಿನ ಅನಿಷ್ಟ ಪದ್ದತಿಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿವೆ.
ಮಹಾರಾಷ್ಟ್ರವೂ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ವಿವಾಹಿತ ಮಹಿಳೆಯರು ತಮ್ಮ ಪತಿ ಮೃತಪಟ್ಟ ಬಳಿಕ, ‘ಮಂಗಳಸೂತ್ರ’ವನ್ನು ಕಿತ್ತು, ಕಾಲಿನ ಉಂಗುರಗಳನ್ನು ತೆಗೆದು, ಸಿಂಧೂರವನ್ನು ಅಳಿಸಿ ಹಾಗೂ ಅವರ ಬಳೆಗಳನ್ನು ಒಡೆದುಹಾಕಲಾಗುತ್ತದೆ. ಆ ನಂತರ, ವಿಧವೆಯರು ಎಂದಿಗೂ ಸಿಂಧೂರ ಮತ್ತು ಬಳೆಗಳನ್ನು ಧರಿಸುವಂತಿರಲಿಲ್ಲ. ಅಲ್ಲದೆ, ಸಾರ್ವಜನಿಕ ಗಣಪತಿ ಪೂಜೆಗಳು, ಹಳದಿ ಶಾಸ್ತ್ರ, ಧ್ವಜಾರೋಹಣ ಸೇರಿದಂತೆ ಹಲವಾರು ಸಮಾರಂಭಗಳಿಂದ ವಿಧವೆಯನ್ನು ದೂರ ಇಡಲಾಗುತ್ತದೆ. ಇದೊಂದು ಸಾಮಾಜಿಕ ಪಿಡುಗಾಗಿ ಎದುರಾಗಿದೆ.
ಇಂತಹ ಪಿಡುಗು, ತಾರತಮ್ಯದ ವಿರುದ್ಧ ಮಹಾರಾಷ್ಟ್ರದಲ್ಲಿ ಅಭಿಮಾನ ನಡೆಯುತ್ತಿದೆ. ಪರಿಣಾಮವಾಗಿ, ಮಹಾರಾಷ್ಟ್ರದಲ್ಲಿರುವ 27,000 ಗ್ರಾಮಗಳ ಪೈಕಿ 7,683 ಗ್ರಾಮಗಳು ಗ್ರಾಮ ಸಭೆಗಳನ್ನು ನಡೆಸಿವೆ. ಆ ಸಭೆಗಳಲ್ಲಿ ವಿಧವೆಯರ ವಿರುದ್ಧದ ತಾರತಮ್ಯ ಪದ್ದತಿಗಳನ್ನು ರದ್ದುಗೊಳಿಸುವುದಾಗಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಪಾಲಿಸುತ್ತಿರುವುದಾಗಿ ಹೇಳಿಕೊಂಡಿದೆ.
2022ರ ಮೇ 4 ರಂದು ಕೊಲ್ಹಾಪುರ ಜಿಲ್ಲೆಯ ಹೆರ್ವಾಡ್ ಗ್ರಾಮವು ವಿಧವೆಯರಿಗೆ ವಿರುದ್ಧದ ಈ ಅನಿಷ್ಟ ಪದ್ದತಿಗಳನ್ನು ನಿಷೇಧಿಸಿದ ದೇಶದ ಮೊದಲ ಗ್ರಾಮ. ಈ ಗ್ರಾಮದಿಂದ ಆರಂಭಗೊಂಡ ಅಭಿಯಾನ ಈಗ ರಾಜ್ಯಾದ್ಯಂತ ಪಸರಿಸಿದೆ. ಅಲ್ಲದೆ, ಮಹಿಳೆಯರು ಘನತೆಯಿಂದ ಬದುಕುವ ಹಕ್ಕನ್ನು ಕಾಪಾಡಿಕೊಳ್ಳಲು ಶ್ರಮಿಸುತ್ತಿದೆ.
ಹೆವಾರ್ಡ್ ಗ್ರಾಮದಿಂದ ಆರಂಭವಾದ ಅಭಿಯಾನದ ಬಗ್ಗೆ ಮಾತನಾಡಿರುವ ಹೆರ್ವಾಡ್‌ನ ಮಾಜಿ ಸರಪಂಚ್ ಸುರ್ಗೊಂಡ ಪಾಟೀಲ್, “ತಮ್ಮ ಗ್ರಾಮದಲ್ಲಿ ಬಳೆಗಳನ್ನು ಒಡೆಯುವ, ಮಂಗಳಸೂತ್ರ ಮತ್ತು ಕಾಲಿನ ಉಂಗುರಗಳನ್ನು ತೆಗೆಯುವ ಪದ್ಧತಿ ಬಹುತೇಕ ನಿಂತುಹೋಗಿದೆ. ಅಭಿಯಾನದ ಆರಂಭದಲ್ಲಿ ಸಾವು ಸಂಭವಿಸಿದ ಮನೆಗಳಿಗೆ ಭೇಟಿ ನೀಡಿ ಈ ಪದ್ಧತಿಗಳನ್ನು ಅನುಸರಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೆವು. ಈಗ ಅಂತಹ ಪರಿಶೀಲನೆಗಳನ್ನು ನಿಲ್ಲಿಸಿದ್ದೇವೆ. ಜನರು ಕೂಡ ಹೆಚ್ಚು ಜಾಗೃತರಾಗಿದ್ದಾರೆ” ಎಂದು ಹೇಳಿದ್ದಾರೆ.
ಅಲ್ಲದೆ, “ಗ್ರಾಮದಲ್ಲಿ ಕೆಲವು ವಿಧವೆಯರು ಮರುಮದುವೆಯಾಗಿದ್ದಾರೆ. ಅವರನ್ನು ಸಾಮಾಜಿಕ ಮತ್ತು ಧಾರ್ಮಿಕ ಕೂಟಗಳಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ವಿಧವೆಯರೂ ಕೂಡ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಭಾಗಿಯಾಗುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಗ್ರಾಮದಲ್ಲಿ ವಿಧವೆಯರನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳಲಾಗುತ್ತಿದೆ. ಜನರು ನಾವು ಮನುಷ್ಯರು ಎಂದು ಅರಿತುಕೊಂಡಿದ್ದಾರೆ. ಆದಾಗ್ಯೂ, ಮನಸ್ಥಿತಿ ಬದಲಾಗಬೇಕು. ಹಳೆಯ ಪದ್ಧತಿಗಳನ್ನು ರಾತ್ರೋರಾತ್ರಿ ನಿಲ್ಲಿಸಲಾಗುವುದಿಲ್ಲ. ಕುಟುಂಬಗಳಲ್ಲಿನ ಹಿರಿಯರನ್ನು ಕೆಲವು ಆಚರಣೆಗಳನ್ನು ಬಿಟ್ಟುಬಿಡುವಂತೆ ಮನವೊಲಿಸುವುದು ಕಷ್ಟ. ಹಿರಿಯರನ್ನು ಮನವೊಲಿಸುವ ಕೆಲಸ ಈಗಲೂ ನಡೆಯುತ್ತಿದೆ” ಎಂದು 12 ವರ್ಷಗಳ ಹಿಂದೆ ತನ್ನ ಗಂಡನನ್ನು ಕಳೆದುಕೊಂಡ ಹೆರ್ವಾಡ್ ನಿವಾಸಿ ವೈಶಾಲಿ ಪಾಟೀಲ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಪ.ಬಂಗಾಳದಲ್ಲಿ 25 ಸಾವಿರ ಶಿಕ್ಷಕರ ವಜಾ: ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್; ಏನಿದು ಪ್ರಕರಣ?
“ಹೆರ್ವಾಡ್ ಗ್ರಾಮಸಭೆಯ ನಿರ್ಣಯ ಕೈಗೊಳ್ಳುವುದಕ್ಕೂ ಮುನ್ನವೇ ನಾವು ವಿಧವೆಯನ್ನು ಎಲ್ಲ ಕಾರ್ಯಕ್ರಮಗಳಲ್ಲಿ ಒಳಗೊಳ್ಳುವ ಅಭ್ಯಾಸವನ್ನು ಮಾಡಿಕೊಂಡಿದ್ದೆವು. ನಾನು 2017-22 ರವರೆಗೆ ಸರಪಂಚ್ ಆಗಿದ್ದಾಗ, ವಿಧವೆಯರು ಮನೆಯಿಂದ ಹೊರಬಂದು ಸಾಮಾಜಿಕವಾಗಿ ಬೆರೆಯುತ್ತಿರಲಿಲ್ಲ. ಗ್ರಾಮದಲ್ಲಿನ ಆಕ್ಷೇಪಣೆಗಳ ಹೊರತಾಗಿಯೂ, ನಾನು ಎಲ್ಲ ಮಹಿಳೆಯರನ್ನು ಹರಿಶಿನ-ಕುಂಕುಮ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತೇನೆ. ವಿಧವೆಯರಿಗೆ ಉಡುಗೊರೆಗಳನ್ನು ನೀಡುತ್ತೇನೆ” ಎಂದು ನಾಗ್ಪುರ ಜಿಲ್ಲೆಯ ಕಡೋಲಿ ಗ್ರಾಮದ ಮಾಜಿ ಸರಪಂಚ್ ಪ್ರಾಂಜಲ್ ವಾಘ್ ಹೇಳಿದ್ದಾರೆ.
“ವಿಧವೆಯರು ಘನತೆಯಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳಲು ತಮ್ಮ ಗ್ರಾಮ ಸಭೆ ಸಂಕಲ್ಪ ಮಾಡಿದೆ. ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಅವರಿಗೆ ಪಿಂಚಣಿ ಮತ್ತು ಮನೆಗಳು ಸಿಗುವಂತೆ ಮಾಡಲು ಶ್ರಮಿಸುತ್ತಿದ್ದೇವೆ. ಅವರ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯತಿ ಕೂಡ ಕಾಳಜಿಯಿಂದ ಕೆಲಸ ಮಾಡುತ್ತಿದೆ” ಎಂದು ನಾಸಿಕ್ ಜಿಲ್ಲೆಯ ಧೋಂಡ್ವೀರ್ ನಗರ ಗ್ರಾಮ ಪಂಚಾಯತ್ ಸದಸ್ಯ ಸಂಜಯ್ ಪವಾರ್ ಹೇಳಿದ್ದಾರೆ.
ಕೊಲ್ಹಾಪುರ, ಸಾಂಗ್ಲಿ ಹಾಗೂ ಸೋಲಾಪುರ ಜಿಲ್ಲೆಗಳಲ್ಲಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತ ಲಲಿತ್ ಬಾಬರ್ ಅವರು ಹೇಳುವಂತೆ, “ಸಾಂಗ್ಲಿ ಜಿಲ್ಲೆಯಲ್ಲಿ ಸುಮಾರು 76 ಗ್ರಾಮ ಪಂಚಾಯತಿಗಳು ವಿಧವೆಯರ ವಿರುದ್ಧದ ತಾರತಮ್ಯ ಮತ್ತು ಅನಿಷ್ಠ ಪದ್ದತಿಗಳನ್ನು ರದ್ದುಗೊಳಿಸಿವೆ” ಎಂದು ಹೇಳಿದ್ದಾರೆ.