ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜಕೀಯ ವಿಶ್ಲೇಷಕ, ಹೋರಾಟಗಾರ ಯೋಗೇಂದ್ರ ಯಾದವ್ ಅವರ ಮೇಲೆ ಕೆಲವು ಪುಂಡರು ಹಲ್ಲೆ ನಡೆಸಿದ್ದಾರೆ. ಕಾರ್ಯಕ್ರಮದಲ್ಲಿ ಅವರು ಮಾತನಾಡದಂತೆ ತಡೆಯಲು 40-50 ಪುಂಡರ ಗುಂಪು ದಾಂಧಲೆ ನಡೆಸಿದೆ. ವೇದಿಕೆಯತ್ತ ನುಗ್ಗಿ ಯೋಗೇಂದ್ರ ಯಾದವ್ ಅವರನ್ನು ಎಳೆದಾಡಿದೆ.
ತಮ್ಮ ಮೇಲಿನ ಹಲ್ಲೆಯ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿಡುವ ಯಾದವ್, “ಕಾರ್ಯಕ್ರಮದಲ್ಲಿ ‘ಸಂವಿಧಾನ ರಕ್ಷಣೆ ಮತ್ತು ನಮ್ಮ ಮತ’ ಎಂಬ ಚರ್ಚೆ ನಡೆಯುತ್ತಿತ್ತು. ಈ ವೇಳೆ, ಭಾರತ್ ಜೋಡೋ ಅಭಿಯಾನದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಮತ್ತು ನನ್ನ ಮೇಲೆ ಹಲ್ಲೆ ನಡೆದಿದೆ. ಪ್ರಜಾಪ್ರಭುತ್ವವನ್ನು ಪ್ರೀತಿಸುವವರ ಮೇಲೆ ಇಂತಹ ಹಲ್ಲೆಗಳು ನಡೆಯುತ್ತಲೇ ಇವೆ. ಪೊಲೀಸರ ಮಧ್ಯಪ್ರವೇಶಿಸಿದರೂ, ದಾಳಿಕೋರರು ತಮ್ಮ ವಿಧ್ವಂಸಕತೆಯನ್ನು ಮುಂದುವರೆಸಿದರು. ಪರಿಣಾಮ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು” ಎಂದು ತಿಳಿಸಿದ್ದಾರೆ.
”ಮಹಾರಾಷ್ಟ್ರಕ್ಕೆ ಕಳೆದ 25 ವರ್ಷಗಳಿಂದ ಆಗಾಗ್ಗೆ ಭೇಟಿ ನೀಡುತ್ತಿದ್ದೇವೆ. ಹಲವು ಕಾರ್ಯಕ್ರಮಗಳಲ್ಲಿ ಮಾತನಾಡಿದ್ದೇನೆ. ಇಂತಹ ಘಟನೆಯನ್ನು ಎಂದಿಗೂ ಎದುರಿಸಲಿಲ್ಲ. ಈ ಘಟನೆಯು ಪ್ರಜಾಪ್ರಭುತ್ವಕ್ಕೆ ಕಳಂಕವಾಗಿವೆ. ಇಂತಹ ಘಟನೆಗಳು ನಮ್ಮ ಸಂಕಲ್ಪವನ್ನು ಬಲಪಡಿಸುತ್ತವೆ” ಎಂದಿದ್ದಾರೆ.