ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್ಸಿಪಿಯ ಅಜಿತ್ ಪವಾರ್ ಬಣದ ಸದಸ್ಯ ಬಾಬಾ ಸಿದ್ದೀಕಿಯ ಮೇಲೆ ಗುಂಡು ಹಾರಿಸಿ, ಹತ್ಯೆ ಮಾಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಮುಂಬೈನ ಬಾಂದ್ರಾದಲ್ಲಿ ಈ ದಾಳಿ ನಡೆದಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಬಾಂದ್ರಾ ಪೂರ್ವದ ಶಾಸಕರಾಗಿರುವ ಅವರ ಪುತ್ರ ಝೀಶಾನ್ ಅವರ ಕಚೇರಿಯ ಸಮೀಪ ಕಾರಿನಲ್ಲಿ ಕುಳಿತಿದ್ದ ವೇಳೆ ಶನಿವಾರ ರಾತ್ರಿ 9.30ರ ಸುಮಾರಿಗೆ ಸಿದ್ದೀಕಿ ಮೇಲೆ ಮೂರು ಗುಂಡುಗಳನ್ನು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ. ಕೂಡಲೇ ಲೀಲಾವತಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತಾದರೂ, ಫಲ ನೀಡಲಿಲ್ಲ.
ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಸಿದ್ದಿಕ್ ಅವರು 48 ವರ್ಷಗಳ ಕಾಲ ಕಾಂಗ್ರೆಸ್ನೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಫೆಬ್ರವರಿಯಲ್ಲಿ ಪಕ್ಷವನ್ನು ತೊರೆದು ಅಜಿತ್ ಪವಾರ್ ಅವರ ಎನ್ಸಿಪಿಗೆ ಸೇರಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನಿಂದ ಶಾಸಕನಾಗಿದ್ದ ಝೀಶನ್ ಸಿದ್ದೀಕಿ ಅವರನ್ನು ಆಗಸ್ಟ್ನಲ್ಲಿ ಕಾಂಗ್ರೆಸ್ನಿಂದ ಉಚ್ಚಾಟಿಸಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಕೂಡಲೇ ಕಾರ್ಯ ಪ್ರವೃತ್ತರಾದ ಮುಂಬೈ ಪೊಲೀಸರು ಇಬ್ಬರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಬಾಬಾ ಸಿದ್ದೀಕಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಸಂಜಯ್ ದತ್ ಸೇರಿದಂತೆ ಹಲವು ಪ್ರಮುಖರು ಧಾವಿಸಿದ್ದಾರೆ.
