ಎನ್‌ಸಿಪಿಯ ಹಿರಿಯ ನಾಯಕರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ನಡುವೆ ನಡೆದಿರುವ ತಡರಾತ್ರಿಯ ಸಭೆಗಳು ಶರದ್ ಪವಾರ್ ಅವರ ಮುಂದಿನ ರಾಜಕೀಯ ನಡೆಯ ಬಗೆಗಿನ ಉಹಾಪೋಹಗಳಿಗೆ ಕಾರಣವಾಗಿವೆ. ಅಲ್ಲದೇ, ಎನ್‌ಸಿಪಿಯ ಎರಡು ಬಣಗಳ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಶರದ್ ಪವಾರ್ ಅವರನ್ನು ಇತ್ತೀಚೆಗೆ ಎನ್‌ಸಿಪಿಯ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಮೊದಲು ಭೇಟಿಯಾಗಿದ್ದರು. ನಂತರ ಅದೇ ದಿನ ಸಂಜೆ ಫಡ್ನವಿಸ್ ಕೂಡ ಅವರನ್ನು ಭೇಟಿಯಾಗಿದ್ದಾರೆ.
ಆದಾಗ್ಯೂ, ಸಭೆಯಲ್ಲಿ ಏನೆಲ್ಲ ಚರ್ಚೆಯಾಗಿದೆ ಎಂಬುದನ್ನು ಸಭೆಗಳಲ್ಲಿ ಭಾಗವಹಿಸಿದ್ದ ನಾಯಕರಾಗಲಿ ಅಥವಾ ಮುಖ್ಯಮಂತ್ರಿ ಕಚೇರಿಯಾಗಲಿ ಈವರೆಗೆ ಬಹಿರಂಗಪಡಿಸಿಲ್ಲ. ಆಡಳಿತಾರೂಢ ಮಹಾಯುತಿಯ ಭಾಗವಾಗಿರುವ ಎನ್‌ಸಿಪಿ (ಎಪಿ) ಮತ್ತು ವಿಪಕ್ಷಗಳ ಭಾಗವಾಗಿರುವ ಎನ್‌ಸಿಪಿ (ಎಸ್‌ಪಿ) ಬಣಗಳು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2023ರಲ್ಲಿ, ಅವಿಭಜಿತ ಎನ್‌ಸಿಪಿಯಿಂದ ಅಜಿತ್ ಪವಾರ್ ನೇತೃತ್ವದಲ್ಲಿ ವಿಭಜನೆಗೊಂಡ ಬಣವು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೋಟ ಸೇರಿತ್ತು. ಆ ನಂತರದಲ್ಲಿ, ಅಜಿತ್ ಬಣ ಎದುರಿಸುತ್ತಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ಈ ಸಭೆಗಳು ನಡೆಯುತ್ತಿರುವುದು ಕೂತುಹಲಕ್ಕೆ ಕಾರಣವಾಗಿವೆ.
ಇನ್ನೂ ಮೂಲಗಳ ಪ್ರಕಾರ, ಶರದ್ ಪವಾರ ಬಣದ ಅರ್ಧದಷ್ಟು ಅಂದರೆ ಸುಮಾರು 10ಕ್ಕೂ ಹೆಚ್ಚು ಶಾಸಕರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಹಾರಲು ಸಜ್ಜಾಗಿದ್ದಾರೆ. ವಿರೋಧ ಪಕ್ಷದಲ್ಲಿ ಉಳಿಯುವುದು ಅವರ ಕ್ಷೇತ್ರಗಳ ಅಭಿವೃದ್ಧಿಗೆ ಮತ್ತು ಸುಸಜ್ಜಿತ ಆಡಳಿತ ನಡೆಸುವುದಕ್ಕೆ ಕಷ್ಟಕರ ಎಂದು ಅವರೆಲ್ಲರೂ ಭಾವಿಸಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಈ ವಿಚಾರದಲ್ಲಿ ಶರದ್ ಪವಾರ್ ಮೌನವಹಿಸಿದ್ದು, ಪಕ್ಷದ ಮುಂದಿನ ನಡೆಯ ಬಗ್ಗೆ ಯಾವುದೇ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೊರಹಾಕಿಲ್ಲ.
ಮಹಾರಾಷ್ಟ್ರದ ಆರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಶರದ್ ಪವಾರ್ ಬಣ ಚಿಕ್ಕದಾಗಿದ್ದರೂ, ವಿಧಾನಸಭೆಯಲ್ಲಿ 10 ಶಾಸಕರು ಮತ್ತು 8 ಲೋಕಸಭಾ ಸಂಸದರನ್ನು ಹೊಂದಿದೆ.
ಆದ್ದರಿಂದ, ಶರದ್ ಪವಾರ್ ಬಣವನ್ನು ತಮ್ಮತ್ತ ಸೆಳೆದುಕೊಂಡರೆ, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಪ್ರಸ್ತಾವಿತ ‘ಕ್ಷೇತ್ರ ಮರುವಿಂಗಡಣೆ ಮಸೂದೆ’ ಸೇರಿದಂತೆ ಪ್ರಮುಖ ಬಿಲ್‌ಗಳಿಗೆ ಬಹುಮತ ಪಡೆಯಲು ಸಾಧ್ಯವಾಗಲಿದೆ ಎಂದು ಬಿಜೆಪಿ ಭಾವಿಸಿದೆ. ಎನ್‌ಸಿಪಿಯ ಎರಡೂ ಬಣಗಳನ್ನೂ ಒಗ್ಗೂಡಿಸಿ, ಶರದ್ ಬಣವನ್ನೂ ಎನ್‌ಡಿಎ ಭಾಗವಾಹಿಸಿಕೊಳ್ಳಲು ಹವಣಿಸುತ್ತಿದೆ.
ಆದಾಗ್ಯೂ ಎನ್‌ಸಿಪಿಯ ಎರಡೂ ಬಣದ ನಾಯಕರಲ್ಲಿ ಬೇರೆಯದ್ದೇ ಅಭಿಪ್ರಾಯಗಳಿವೆ. ಶರದ್ ಪವಾರ್ ಬಣದಲ್ಲಿನ ನಾಯಕರು, ತಮ್ಮ ಪಕ್ಷವು ಅಜಿತ್ ಪವಾರ್ ನೇತೃತ್ವದ ಪಕ್ಷದೊಂದಿಗೆ ಸಮನ್ವಯ ಸಾಧಿಸದೇ ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳುವುದು ಅಥವಾ ಬಿಜೆಪಿಯೊಂದಿಗೆ ಸ್ನೇಹ ಬೆಳೆಸುವ ಆಯ್ಕೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಂತೆಯೇ, ಅಜಿತ್ ಬಣದಲ್ಲಿ, ಎರಡೂ ಬಣಗಳು ಒಗ್ಗೂಡುವುದಾದರೆ, ಶರದ್ ಪವಾರ್ ಬಣದ ಸ್ಥಾನಮಾನ ಮತ್ತು ಸುನೇತ್ರಾ ಪವಾರ್ ಅವರ ನಾಯಕತ್ವ ಕುರಿತು ಚರ್ಚೆಗಳು ನಡೆಯುತ್ತಿವೆ.
ಆದಾಗ್ಯೂ, ಶರದ್ ಪವಾರ್ ಬಣಕ್ಕೆ ಬಿಜೆಪಿ ಬಲೆ ಬೀಸಿದೆ. ಮುಂದೆ ಏನಾಗಲಿದೆ. ಶರದ್ ಪವಾರ್ ಅವರು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿಯಲ್ಲೇ ಉಳಿಯುವರೇ, ಅಥವಾ ಬಿಜೆಪಿಯ ಸಖ್ಯ ಬೆಳೆಸುವರೇ ಕಾದುನೋಡಬೇಕಿದೆ!




