ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 20ರಂದು ಮತದಾನ ನಡೆಯಲಿದೆ. ಎಲ್ಲ ಪಕ್ಷಗಳು, ಮೈತ್ರಿಕೂಟಗಳು ಭಾರೀ ಪ್ರಚಾರ ನಡೆಸುತ್ತಿವೆ. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಪರವಾಗಿ ಪ್ರಚಾರಕ್ಕೆ ಬಂದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘ಬಟೇಂಗೆ ತೊ ಕಟೆಂಗೆ’ (ವಿಭಜಿಸಿದರೆ ಒಡೆಯುತ್ತದೆ) ಎಂಬ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಮಹಾಯುತಿಯ ಭಾಗವೇ ಆಗಿರುವ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ಹೇಳಿಕೆ ನೀಡಲು ಇದು ಉತ್ತರ ಪ್ರವೇಶವಲ್ಲ ಎಂದು ಕಿರಿಕಾರಿದ್ದಾರೆ.
ಮಹಾಯುತಿ ಮೈತ್ರಿಕೂಟದಲ್ಲಿ ಅಜಿತ್ ಪವಾರ್ ಅವರ ಎನ್‌ಸಿಪಿಯನ್ನು ಒಳಗೊಂಡಿರುವುದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಒಂದು ವರ್ಗಕ್ಕೆ ಒಪ್ಪಿಗೆ ಇಲ್ಲ. 2022ರಲ್ಲಿ ಮಹಾಯುತಿ ಸರ್ಕಾರ ರಚನೆಯಾದಾಗಿನಿಂದಲೂ ಆ ವರ್ಗ ಅಜಿತ್ ವಿರುದ್ಧ ಕಿಡಿಕಾರುತ್ತಲೇ ಇದೆ. ಇದೀಗ, ಚುನಾವಣಾ ಸಮಯದಲ್ಲಿಯೂ ಅಜಿತ್ ಅವರನ್ನು ಮೈತ್ರಿಯಿಂದ ಹೊರಹಾಕಬೇಕೆಂದು ಬಿಜೆಪಿ-ಆರ್‌ಎಸ್‌ಎಸ್ ಒಂದು ವಿಭಾಗ ಹೇಳುತ್ತಿತ್ತು. ಈಗ, ಅಜಿತ್ ಅವರೂ ಕೂಡ ಬಿಜೆಪಿ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ. ಯೋಗಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
“ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಬಹಿರಂಗ ಪ್ರಚಾರ ಸಭೆ ಮತ್ತು ಮಾಧ್ಯಮ ಸಂವಾದಗಳಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿದ್ದೇನೆ. ಮಹಾರಾಷ್ಟ್ರವು ಪ್ರಧಾನಿ ಮೋದಿ ಅವರ ‘ಸಬ್ ಕಾ ಸಾಥ್, ಸಾಬ್ ಕಾ ವಿಕಾಸ್’ ಮಂತ್ರವನ್ನು ಅನುಸರಿಸುತ್ತದೆ. ಯೋಗಿ ಆದಿತ್ಯನಾಥ್ ನೀಡಿರುವ ಘೋಷಣೆ ಸರಿಯಲ್ಲ. ಅವರ ಘೋಷಣೆ ಮಹಾರಾಷ್ಟ್ರಕ್ಕೆ ಅನ್ವಯಿಸುವುದಿಲ್ಲ. ಇದು ಉತ್ತರ ಪ್ರದೇಶವೂ ಅಲ್ಲ. ಇಲ್ಲಿಗೆ ಅವರ ಘೋಷಣೆಗಳು ಸಲ್ಲುವುದಿಲ್ಲ” ಎಂದು ಅಜಿತ್ ಪವಾರ್ ಹೇಳಿದ್ದಾರೆ.