ಏಳು ಮಹಡಿಯ ಕಟ್ಟಡದಲ್ಲಿ ಶುಕ್ರವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ ಆರು ಮಂದಿ ಜೀವಂತವಾಗಿ ಸುಟ್ಟು ಹೋಗಿರುವ ಹೃದಯವಿದ್ರಾವಕ ಘಟನೆ ಮುಂಬೈನಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈನ ಗೋರೆಗಾಂವ್‌ನ ಆಜಾದ್ ನಗರದಲ್ಲಿರುವ ಜಯ ಭವಾನಿ ಕಟ್ಟಡದಲ್ಲಿ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. 12 ಮಂದಿ ಪುರುಷರು ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕಿ ಸೇರಿದಂತೆ 28 ಮಂದಿ ಮಹಿಳೆಯರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳದಲ್ಲಿಯೇ ಆರು ಮಂದಿ ಮೃತಪಟ್ಟಿದ್ದು, ಚಿಕಿತ್ಸೆ ವೇಳೆ ಮತ್ತೋರ್ವ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಮುಂಬೈನ ಗೋರೆಗಾಂವ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವುಗಳು ಸಂಭವಿಸಿರುವ ಬಗ್ಗೆ ತಿಳಿದು ನೋವಾಗಿದೆ. ನಾವು ಮುಂಬೈ ಪಾಲಿಕೆ ಮತ್ತು ಮುಂಬೈ ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಎಲ್ಲ ನೆರವು ನೀಡಲಾಗುತ್ತಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಮತ್ತು ಸಾಂತ್ವನಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ” ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಟ್ವೀಟ್ ಮಾಡಿದ್ದಾರೆ.
“ಅಗ್ನಿಶಾಮಕ ದಳವು ಸ್ಥಳಕ್ಕೆ ಬರುವ ಮುನ್ನವೇ ಬೆಂಕಿಯು ಕಡ್ಡಡದ ಎಲ್ಲ ಭಾಗಗಳಿಗೂ ಆವರಿಸಿತ್ತು. ನೆಲಮಹಡಿಯಲ್ಲಿದ್ದ ಅಂಗಡಿಗಳು, ಸ್ಕ್ರ್ಯಾಪ್ ವಸ್ತುಗಳು ಮತ್ತು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ” ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.