ಹಿಂದುತ್ವವಾದಿಗಳು ಪ್ರಚಾರ ಮಾಡುತ್ತಿರುವ ನಾನಾ ರೀತಿಯ ‘ಜಿಹಾದ್’ ಆಗ್ಗಾಗ್ಗೆ ಚರ್ಚೆಗೆ ಬರುತ್ತಲೇ ಇದೆ. ಜಿಹಾದ್ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ಕೋಮುದ್ವೇಷ ಬಿತ್ತುವುದು ಹೆಗ್ಗಿಲ್ಲದೆ ನಡೆಯುತ್ತಿದೆ. ಇದೀಗ, ಮಹಾರಾಷ್ಟ್ರದಲ್ಲಿ ‘ಲವ್ ಜಿಹಾದ್’ ಮತ್ತು ಬಲವಂತದ ಮತಾಂತರ ವಿರುದ್ಧ ಹೊಸ ಕಾನೂನು ರೂಪಿಸಲು ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿದೆ. ಅದಕ್ಕಾಗಿ, ಕಾನೂನು ಅಧ್ಯಯನ ನಡೆಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿ ರಚಿಸಿದೆ.
ಸರ್ಕಾರ ರಚಿಸಿರುವ ಸಮಿತಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಆಯೋಗ, ಕಾನೂನು ಮತ್ತು ನ್ಯಾಯಾಂಗ ಇಲಾಖೆ, ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಇಲಾಖೆಗಳ ಕಾರ್ಯದರ್ಶಿಗಳು ಇದ್ದಾರೆ. ಜೊತೆಗೆ, ಗೃಹ ಇಲಾಖೆಯ ಓರ್ವ ಉಪ ಕಾರ್ಯದರ್ಶಿಯನ್ನೂ ಒಳಗೊಳ್ಳಲಾಗಿದೆ.
ಲವ್ ಜಿಹಾದ್ ವಿಚಾರದಲ್ಲಿ ರಾಜ್ಯದಲ್ಲಿರುವ ಪರಿಸ್ಥಿತಿ ಮತ್ತು ಹೊಸ ಕಾಯ್ದೆಯ ರಚನೆಗೆ ಕಾನೂನಿನಲ್ಲಿರುವ ಅವಕಾಶಗಳು ಹಾಗೂ ಇತರ ರಾಜ್ಯಗಳಲ್ಲಿರುವ ಕಾನೂನುಗಳ ಕುರಿತು ಅಧ್ಯಯನ ನಡೆಸಲಿದೆ.
ಬಲವಂತದ ಮತಾಂತರಗಳನ್ನು ತಡೆಯಲು, ಮತಾಂತರದ ವಿರುದ್ಧ ದಾಖಲಾಗುವ ದೂರುಗಳನ್ನು ನಿರ್ವಹಿಸಲು ಅಗತ್ಯ ಶಿಫಾರಸುಗಳ ಕುರಿತು ಸಮಿತಿಯು ವರದಿ ಮಾಡಲಿದೆ ಎಂದು ತಿಳಿದುಬಂದಿದೆ.