ಬಿಜೆಪಿ ನಾಯಕ, ಮಹಾರಾಷ್ಟ್ರ ಬಂದರು ಹಾಗೂ ಮೀನುಗಾರಿಕಾ ಸಚಿವ ನಿತೇಶ್ ರಾಣೆ ಅವರು ಕೇರಳವನ್ನು ‘ಮಿನಿ ಪಾಕಿಸ್ತಾನ’ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೇರಳದ ವಯನಾಡ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದನ್ನು ಉಲ್ಲೇಖಿಸಿ ರಾಣೆ ಈ ರೀತಿ ಹೇಳಿದ್ದಾರೆ.
‘ಕೇರಳ ಮಿನಿ ಪಾಕಿಸ್ತಾನ. ಅದಕ್ಕಾಗಿಯೇ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಅಲ್ಲಿಂದ ಗೆಲುವು ಸಾಧಿಸಿದ್ದಾರೆ. ಎಲ್ಲ ಭಯೋ ತ್ಪಾದಕರು ಅವರಿಗೆ ಮತ ಹಾಕುತ್ತಾರೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಇವರೆಲ್ಲರೂ ಭಯೋತ್ಪಾದಕರ ನೆರವಿನಿಂದ ಸಂಸದರಾಗುತ್ತಿದ್ದಾರೆ’ ಎಂದು ರಾಣೆ ಹೇಳಿದ್ದಾರೆ.
ಅಫ್ಜಲ್ ಖಾನ್ ಎದುರು ಛತ್ರಪತಿ ಶಿವಾಜಿಯ ಐತಿಹಾಸಿಕ ಗೆಲುವಿನ ಸಂಭ್ರಮ ವರ್ಷಾಚರಣೆ ವೇಳೆ ರಾಣೆ ಈ ಮಾತುಗಳನ್ನು ಆಡಿದ್ದಾರೆ.
2019ರಲ್ಲಿ ಕೇರಳದ ವಯನಾಡ್ ಹಾಗೂ ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧೆ ಮಾಡಿದ್ದ ರಾಹುಲ್ ಗಾಂಧಿ, ವಯನಾಡಿನಲ್ಲಿ ಗೆದ್ದಿದ್ದರು. 2024ರಲ್ಲೂ ರಾಹುಲ್ ವಯನಾಡಿನಲ್ಲಿ ಗೆಲುವು ಸಾಧಿಸಿದ್ದರು. ರಾಯಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು ವಯನಾಡ್ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಗೆದ್ದಿದ್ದರು.
ಕಾಂಗ್ರೆಸ್, ಎನ್‌ಸಿಪಿ ತಿರುಗೇಟು
‘ಮುಂಬರುವ ಚುನಾವಣೆಗಳಲ್ಲಿ ಕೇರಳದಲ್ಲಿ ಪಕ್ಷ ಸ್ಪರ್ಧೆ ಮಾಡುತ್ತದೆಯೋ ಇಲ್ಲವೋ ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಪ್ರಶ್ನಿಸಿ. ಇಂಥ ಅಸಂವಿಧಾನಿಕ ಹೇಳಿಕೆಗಳು ಬಿಜೆಪಿ ನಾಯಕರಿಂದ ಆಗಾಗ ಬರುತ್ತಿರುತ್ತದೆ’ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಟ್ವಿಟರ್‌ನಲ್ಲಿ ಕಿಡಿಕಾರಿದ್ದಾರೆ.
ಈ ಹೇಳಿಕೆ ಬಗ್ಗೆ ಗಮನಿಸಬೇಕು ಎಂದು ಎನ್‌ಸಿಪಿ (ಶರದ್‌ಚಂದ್ರ ಪವಾರ್) ಮುಖ್ಯಮಂತ್ರಿ ದೇವೇಂದ್ರ ಫಢ್ನವೀಸ್ ಅವರನ್ನು ಆಗ್ರಹಿಸಿದೆ.
