ಪ್ರಕರಣದ ವಿಚಾರಣೆ ವಳೆ ಕೊಲೆ ಆರೋಪಿಯೊಬ್ಬ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ನ್ಯಾಯಾಧೀಶರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಯ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.
ಥಾಣೆಯ ಕಲ್ಯಾಣ್ ಪಟ್ಟಣದಲ್ಲಿರುವ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಆರೋಪಿ ಚರಣ್ ಸಂತೋಷ್ ಭರಮ್ ಎಂಬಾತ ಚಪ್ಪಲಿ ಎಸೆದಿದ್ದಾನೆ. ಚಪ್ಪಲಿ ನ್ಯಾಯಾಧೀಶರ ಮುಂದಿನ ಮೇಜಿಗೆ ಬಡಿದು, ಕೆಳಗೆ ಬಿದ್ದಿದೆ.
ಕೊಲೆ ಪ್ರಕರಣವೊಂದರಲ್ಲಿ ಚರಣ್ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದರು. ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ತನ್ನ ವಿರುದ್ಧದ ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೇಳಿಕೊಂಡಿದ್ದಾನೆ. ತನ್ನ ವಕೀಲರನ್ನು ಕರೆದು ಅರ್ಜಿ ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಆದರೆ, ಆತನ ಪರ ವಕೀಲರು ಕೋರ್ಟ್ನಲ್ಲಿರಲಿಲ್ಲ. ಬೇರೊಬ್ಬ ವಕೀಲರ ಮೂಲಕವೇ ಅರ್ಜಿ ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿ, ವಿಚಾರಣೆಯನ್ನು ಮುಂದೂಡಿದ್ದಾರೆ. ಆದರೆ, ಕುಪಿತಗೊಂಡ ಆರೋಪ ನ್ಯಾಯಾಧೀಶರತ್ತ ಚಪ್ಪಲಿ ಬೀಸಿದ್ದಾನೆ.
ಆರೋಪಿಯ ವಿರುದ್ಧ ಬಿಎನ್ಎಸ್ ಸೆಕ್ಷನ್ 132, 125 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.