ಮತದಾರರ ಪಟ್ಟಿಯಲ್ಲಿ ಓರ್ವ ಮಹಿಳೆಯ ಹೆಸರು ಆರು ಬಾರಿ ನೋಂದಣಿಯಾಗಿರುವ ಪ್ರಕರಣದ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಪಾಲ್ಘರ್ ಜಿಲ್ಲೆಯ ನಲಸೋಪಾರ ನಿವಾಸಿಯಾಗಿರುವ ಮಹಿಳೆಯ ಹೆಸರು ವಿಭಿನ್ನ ಫೋಟೋಗಳೊಂದಿಗೆ ನೋಂದಣಿಯಾಗಿದ್ದು, ಅವರ ಹೆಸರಿನಲ್ಲಿ ಆರು ಮತದಾರ ಗುರುತಿನ ಚೀಟಿಗಳು (ಎಪಿಕ್ ಸಂಖ್ಯೆ) ಇವೆ ಎಂಬಂದು ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗ ಭಾರೀ ವಿವಾದಕ್ಕೆ ಸಿಲುಕಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬೆಂಗಳೂರಿನ ಮಹದೇವಪುರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ. 10 ಚ.ಅಡಿ ವಿಸ್ತೀರ್ಣದ ಮನೆಯ ವಿಳಾಸದಲ್ಲಿ 80 ಜನರಿಗೆ ಗುರುತಿನ ಚೀಟಿ ನೀಡಲಾಗಿದೆ. ಆದರೆ, ಅವರಾರು ಬೆಂಗಳೂರಿನ ಮತದಾರರೇ ಅಲ್ಲ ಎಂಬುದನ್ನು ದಾಖಲೆ ಸಮೇತ ಬಹಿರಂಗ ಪಡಿಸಿದ್ದರು. ಅಲ್ಲದೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿಯೂ ಚುನಾವಣಾ ಆಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಇನ್ನು, ಬಿಹಾರದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆಯಲ್ಲೂ (ಎಸ್‌ಐಆರ್) ನಾನಾ ತಪ್ಪುಗಳು ನಡೆಯುತ್ತಿವೆ ಎಂದು ವಿಪಕ್ಷಗಳು ಆರೋಪಿಸಿವೆ.
ಇದೇ ಸಮಯದಲ್ಲಿ, ಮಹಾರಾಷ್ಟ್ರದ ನಲಸೋಪರ ವಿಧಾನಸಭಾ ಕ್ಷೇತ್ರದ ನಿವಾಸಿ ಸುಷಮಾ ಗುಪ್ತಾ (39) ಅವರ ಹೆಸರು ಮತದಾರರ ಪಟ್ಟಿಯಲ್ಲಿ ಆರು ಬಾರಿ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಪಟ್ಟಿಯಲ್ಲಿ ಆರು ವಿಭಿನ್ನ ಎಪಿಕ್ ಸಂಖ್ಯೆಗಳು ಅವರ ಹೆಸರಿನಲ್ಲಿವೆ ಎಂದು ಆಲ್ಟ್ ನ್ಯೂಸ್ ಪತ್ರಕರ್ತ ಅಭಿಷೇಕ್ ಕುಮಾರ್ ‘ಎಕ್ಸ್’ನಲ್ಲಿ ಗಮನ ಸೆಳೆದಿದ್ದಾರೆ.
ಮತದಾರರ ಪಟ್ಟಿಯಲ್ಲಿ ಆರು ನೋಂದಣಿಗಳಲ್ಲಿಯೂ ಅವರ ಹೆಸರನ್ನು ‘ಗುಪ್ತ ಗುಪ್ತಾ’ ಎಂದು ಉಲ್ಲೇಖ ಮಾಡಲಾಗಿದೆ. ಒಂದೇ ರೀತಿಯ ಛಾಯಾಚಿತ್ರಗಳನ್ನು ಲಗತ್ತಿಸಲಾಗಿದೆ. ಅವರ ವಯಸ್ಸು 39 ವರ್ಷ, ಅವರ ಗಂಡನ ಹೆಸರು ಸಂಜಯ್ ಗುಪ್ತಾ ಹಾಗೂ ಅವರ ವಾಸಸ್ಥಳ ಮಾತಾ ಜಿವ್ದಾನಿ ಚಾಲ್ ಎಂದು ಪಟ್ಟಿ ಮಾಡಲಾಗಿದೆ.
ಚುನಾವಣಾ ಆಯೋಗದ (EC) ವೆಬ್‌ಸೈಟ್‌ನ ‘ಹುಡುಕಾಟ’ (ಸೆರ್ಚ್) ವಿಭಾಗದಲ್ಲಿ ನಲಸೋಪರ ಕ್ಷೇತ್ರದ ಸಂಜಯ್ ಗುಪ್ತಾ ಅವರನ್ನು ವಿವಾಹವಾದ 39 ವರ್ಷದ ಸುಷಮಾ ಗುಪ್ತಾ ಮಾಹಿತಿಯನ್ನು ಹುಡುಕಲು ಪ್ರಯತ್ನಿಸಿದಾಗ, ಫಲಿತಾಂಶದಲ್ಲಿ ಐದು ಗುರುತುಗಳು ದೊರೆಯುತ್ತಿವೆ. ಅವುಗಳಲ್ಲಿ ನಾಲ್ಕು ಕ್ಷೇತ್ರದ ನೈಲ್‌ಮೋರ್ ಭಾಗದಲ್ಲಿ ಮತ್ತು ಒಂದು ತುಲಿಂಜ್ ಭಾಗದಲ್ಲಿ ಕಂಡುಬರುತ್ತದೆ.
ಅದೇ ರೀತಿ ಸಂಜಯ್ ಗುಪ್ತಾ ಅವರನ್ನು ವಿವಾಹವಾದ 39 ವರ್ಷದ ‘ಗುಪ್ತಾ ಗುಪ್ತಾ’ ಎಂಬ ಮಹಿಳೆಯ ಕುರಿತು ಹುಡುಕಿದಾಗ ನೈಲ್‌ಮೋರ್ ಭಾಗದಲ್ಲಿ ಪ್ರತ್ಯೇಕ ನೋಂದಣಿ ಸಂಖ್ಯೆ ಮತ್ತು ವಿವರ ಸಿಗುತ್ತದೆ.
ಕಾಮನ್‌ವೆಲ್ತ್ ಮಾನವ ಹಕ್ಕುಗಳ ಕಾರ್ಯಕ್ರಮ (CHRI) ನಡೆಸಿದ ಅಡ್ಡ-ಪರಿಶೀಲನಾ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾದ ಮತದಾರರ ಪಟ್ಟಿಯಲ್ಲಿ ಸುಷಮಾ ಗುಪ್ತಾ ಅವರ ಹೆಸರು ಆರು ಬಾರಿ ಕಾಣಿಸಿಕೊಂಡಿದೆ. ಅದರಲ್ಲಿ, ಒಂದು ಚೀಟಿಯಲ್ಲಿ ಅವರ ಹೆಸರನ್ನು ‘ಗುಪ್ತ ಗುಪ್ತಾ’ ಎಂದು ಪಟ್ಟಿ ಮಾಡಿದೆ.
ವಿಭಿನ್ನ ಮತದಾನ ಸಂಖ್ಯೆಗಳನ್ನು ಹೊಂದಿರುವ ಎಲ್ಲ ಆರು ಗುರುತಿನ ಚೀಟಿಗಳು – ಅವರು ಮಾತಾ ಜಿವ್ದಾನಿ ಚಾಲ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ಪತಿಯ ಹೆಸರು ಸಂಜಯ್ ಗುಪ್ತಾ ಎಂದು ಹೇಳುತ್ತವೆ.
ತುಲಿಂಜ್ ಪ್ರದೇಶಕ್ಕೆ ಸಂಬಂಧಿಸಿದ ಒಂದು ಚೀಟಿಯನ್ನು ‘ಅಳಿಸಲಾಗಿದೆ’ (ಡಿಲೀಟ್) ಎಂದು ಗುರುತಿಸಲಾಗಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಮತ್ತು CHRI ನಿರ್ದೇಶಕ ವೆಂಕಟೇಶ್ ನಾಯಕ್ ಮಂಗಳವಾರ ಹಂಚಿಕೊಂಡ ಪಟ್ಟಿಯಲ್ಲಿ; ಸುಷಮಾ ಗುಪ್ತಾ ಅವರ ವಯಸ್ಸು 39 ಎಂದು ಐದು ಗುರಿತಿನ ಚೀಟಿಗಳಲ್ಲಿ ಮತ್ತು ಅಳಿಸಲಾದ ಚೀಟಿಯಲ್ಲಿ 40 ವರ್ಷ ಎಂದು ವಿವರಿಸಲಾಗಿದೆ.
ಆದಾಗ್ಯೂ, ಅಳಿಸಲಾಗಿದೆ ಎಂಬ ಚೀಟಿಯ EPIC ಸಂಖ್ಯೆಯನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ನಮೂದಿಸಿ ಹುಡುಕಿದಾಗ, ಅಲ್ಲಿ, ಆ ಚೀಟಿ ಅಥವಾ ನೋಂದಣಿಯಲ್ಲಿ ‘ಅಳಿಸಲಾಗಿದೆ’ ಎಂಬ ಸ್ಥಿತಿಯನ್ನು ಸೂಚಿಸುವುದಿಲ್ಲ ಎಂದು ನಾಯಕ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು
ಈ ಮತದಾರರ ಪಟ್ಟಿಯನ್ನು ಮತಗಟ್ಟೆ ಏಜೆಂಟ್‌ಗಳಿಗೆ ಒದಗಿಸಲಾದ ಪಟ್ಟಿಗಳಲ್ಲಿ ಒಂದಾಗಿರಬಹುದು. ಆದಾಗ್ಯೂ, ಅದನ್ನು ವಿಧಾನಸಭಾ ಚುನಾವಣೆಗೆ ಬಳಸಲಾಗಿದೆಯೇ ಅಥವಾ ಆ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಗೆ ಬಳಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ನಾಯಕ್ ಹೇಳಿದ್ದಾರೆ.
ಚುನಾವಣಾ ಆಯೋಗದ ವೆಬ್‌ಸೈಟ್ ಏನು ಹೇಳುತ್ತದೆ
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ‘ಚುನಾವಣಾ ಹುಡುಕಾಟ’ (ಸೆರ್ಚ್)ನಲ್ಲಿ ಸುಷಮಾ ಗುಪ್ತಾ ಅವರಿಗೆ ಸಂಬಂಧಿಸಿದ ಆರು ನೋಂದಣಿಗಳನ್ನು ವಿಶ್ಲೇಷಿಸಿದಾಗ, ಐದು ಪ್ರಕರಣಗಳಲ್ಲಿ ಒಂದೇ ಜಿಲ್ಲಾ ಚುನಾವಣಾ ಅಧಿಕಾರಿ (ಗೋವಿಂದ್ ಬೋಡ್ಕೆ), ಚುನಾವಣಾ ನೋಂದಣಿ ಅಧಿಕಾರಿ (ಶೇಖರ್ ಘಾಡ್ಗೆ) ಜಹಾಗೂ ಬೂತ್-ಮಟ್ಟದ ಅಧಿಕಾರಿ (ಸಾಕ್ಷಿ ಸಾವಂತ್) ಅವರೇ ಈ ಪಟ್ಟಿಯನ್ನು ಪರಿಷ್ಕರಿಸಿ, ಅನುಮೋದಿಸಿದ್ದಾರೆ ಎಂದು ತೋರಿಸುತ್ತದೆ. ಒಂದು ಪ್ರಕರಣದಲ್ಲಿ, ಮಾತ್ರ ಬೇರೊಬ್ಬ ಅಧಿಕಾರಿ ಪರಿಷ್ಕರಿಸಿದ್ದಾರೆ.
“ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ, ಅನುಮೋದಿಸುವ ಸಮಯದಲ್ಲಿ ಈ ಅಧಿಕಾರಿಗಳಲ್ಲಿ ಯಾರೂ ಬಹು ನಮೂದುಗಳನ್ನು ಗಮನಿಸದೇ ಇರುವುದು ಕುತೂಹಲಕಾರಿ ಸಂಗತಿ” ಎಂದು ನಾಯಕ್ ಗಮನ ಸೆಳೆದಿದ್ದಾರೆ.