ಅಸ್ಸಾಂನ ತಿನ್‌ಸುಕಿಯಾ ಜಿಲ್ಲೆಯ ದೋಮ್‌ದೊಮಾ ಪಟ್ಟಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ತೆರವುಗೊಳಿಸಿದ ನಂತರ ರಾಜ್ಯದ ಹಲವು ಕಡೆ ಆಕ್ರೋಶ ವ್ಯಕ್ತವಾಗಿದೆ.
ಗಡಿಯಾರ ಗೋಪುರ ನಿರ್ಮಾಣಕ್ಕೆ ಸ್ಥಳಾವಕಾಶ ಕಲ್ಪಿಸಿಕೊಡುವ ಕಾರಣದಿಂದ ಸ್ಥಳದಲ್ಲಿದ್ದ 5.5 ಅಡಿ ಎತ್ತರದ ಮಹಾತ್ಮ ಗಾಂಧಿ ಪ್ರತಿಮೆಯನ್ನು ಬುಧವಾರ(ಜುಲೈ 10) ರಂದು ಕ್ರೇನ್ ಮೂಲಕ ತೆರವುಗೊಳಿಸಲಾಗಿದೆ. ಪ್ರತಿಮೆ ಬದಲಿಸಿದ ನಂತರ ಸ್ಥಳೀಯ ನಿವಾಸಿಗಳು ಸೇರಿ ಹಲವು ಕಡೆ ಪ್ರತಿಭಟನೆ ವ್ಯಕ್ತವಾಗಿದೆ.
ದೋಮ್‌ದೊಮಾ ಕ್ಷೇತ್ರದ ಮಾಜಿ ಶಾಸಕ ದುರ್ಗಾ ಭುಮ್‌ಜಿ, “ರಾಷ್ಟ್ರಪಿತನ ಪ್ರತಿಮೆಯಿದ್ದ ಸ್ಥಳದಲ್ಲಿ ನಾವು ಗಡಿಯಾರ ಗೋಪುರ ನಿರ್ಮಿಸಲು ಅವಕಾಶ ನೀಡುವುದಿಲ್ಲ. ಗಡಿಯಾರ ಗೋಪುರವನ್ನು ಎಲ್ಲಿ ಬೇಕಾದರೂ ನಿರ್ಮಿಸಬಹುದು. ಆದರೆ ಗಾಂಧಿ ಪ್ರತಿಮೆ ಮೂಲ ಸ್ಥಳದಲ್ಲಿಯೇ ಇರಬೇಕು. ಇದು ರಾಷ್ಟ್ರಪಿತನಿಗೆ ಮಾಡಿದ ಅವಮಾನ. ಇದರಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಮನಗರ ಜಿಲ್ಲೆ ಹೆಸರು ಬದಲಾವಣೆ ಯಾರಿಗಾಗಿ, ಏತಕ್ಕಾಗಿ?
ಮಾಜಿ ಶಾಸಕ ದುರ್ಗಾ ಭುಮ್‌ಜಿ ಹಾಗೂ ಅಸ್ಸಾಂನ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟದ ಕಾರ್ಯಕರ್ತರ ನೇತೃತ್ವದಲ್ಲಿ ನೂರಾರು ಮಂದಿ ಟೈರ್‌ಗೆ ಬೆಂಕಿ ಹಚ್ಚಿ ರಸ್ತೆತಡೆ ನಡೆಸಿದರು.
ಪ್ರತಿಭಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ಜಿಲ್ಲಾಡಳಿತ ಪ್ರತಿಮೆ ತೆರವುಗೊಳಿಸುವ ನಿರ್ಧಾರದ ಬಗ್ಗೆ ತಮಗೆ ತಿಳಿದಿರಲಿಲ್ಲ. ನಿಜ ಸಂಗತಿಯ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಅಸ್ಸಾಂ ಮಹಾತ್ಮ ಗಾಂಧಿಯವರ ಬಗ್ಗೆ ಸಾಕಷ್ಟು ಋಣಿಯಾಗಿದೆ. ಅವರು ಅಸ್ಸಾಂಅನ್ನು ಭಾರತಕ್ಕೆ ಭಾರತದ ಭಾಗವಾಗಿಸಲು ದೃಢವಾಗಿ ನಿಂತಿದ್ದರು” ಎಂದು ತಿಳಿಸಿದ್ದಾರೆ.
ಪ್ರತಿಭಟನೆಯ ನಂತರ ಮಾತನಾಡಿದ ಸ್ಥಳೀಯ ಶಾಸಕ ರೂಪೇಶ್ ಗೋವಾಲಾ, ಪ್ರತಿಮೆಯಿದ್ದ ಸ್ಥಳದಲ್ಲಿ 6.5 ಅಡಿ ಎತ್ತರದ ಪ್ರತಿಮೆಯನ್ನು ಇನ್ನು 6 ತಿಂಗಳೊಳಗೆ ಗಡಿಯಾರ ಗೋಪುರದ ಜೊತೆಯಲ್ಲಿಯೇ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.