ಸಂಸತ್ ಭದ್ರತಾ ಲೋಪ ಪ್ರಕರಣದ ಆರನೇ ಆರೋಪಿ ಮಹೇಶ್ ಕುಮಾವತ್ ಎಂಬಾತನನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.
ರಾಜಸ್ಥಾನದ ನಾಗೌರ್ ಜಿಲ್ಲೆಯ ನಿವಾಸಿಯಾದ ಮಹೇಶ್, ಡಿಸೆಂಬರ್ 13 ರಂದು ದೆಹಲಿಗೆ ತೆರಳಿದ್ದು, ಇದೇ ದಿನದಂದು ಇಬ್ಬರು ವ್ಯಕ್ತಿಗಳು ಲೋಕಸಭೆಯ ಸಂದರ್ಶಕರ ಕೊಠಡಿಯಿಂದ ಸದನಕ್ಕೆ ಜಿಗಿದಿದ್ದರು.
ಘಟನೆಯ ನಂತರ ಪ್ರಮುಖ ಸಂಚುಕೋರ ಲಲಿತ್ ಝಾ ದೆಹಲಿಯಿಂದ ಪರಾರಿಯಾಗಿದ್ದರೆ, ರಾಜಸ್ಥಾನದ ಮಹೇಶ್ ಅಡಗಿಕೊಂಡಿದ್ದ. ಆರಂಭದಲ್ಲಿ ಬಂಧಿಸಲಾದ ನಾಲ್ವರು ಆರೋಪಿಗಳ ಮೊಬೈಲ್ ಫೋನ್‌ಗಳನ್ನು ನಾಶಪಡಿಸುವಲ್ಲಿ ಮಹೇಶ್ ಕೂಡ ಲಲಿತ್ ಜೊತೆ ಸೇರಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಟ್ಟು ಅಂಗವೈಕಲ್ಯವಲ್ಲ; ಸ್ಮೃತಿ ಇರಾನಿ ಹೇಳಿಕೆ ಯಾರನ್ನು ಮೆಚ್ಚಿಸಲು?
ಲಲಿತ್ ಮತ್ತು ಮಹೇಶ್ ಇಬ್ಬರೂ ಗುರುವಾರ ನವದೆಹಲಿಯ ಪೊಲೀಸ್ ಠಾಣೆಯಲ್ಲಿ ಒಟ್ಟಿಗೆ ಶರಣಾಗಿದ್ದರು. ಶುಕ್ರವಾರ ಲಲಿತ್‌ನನ್ನು ಬಂಧಿಸಿದ್ದರೆ, ಮಹೇಶ್‌ನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಡಿಸೆಂಬರ್ 13 ರಂದು, ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್ ಎಂಬುವವರು ಲೋಕಸಭೆಯ ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಸದನಕ್ಕೆ ಜಿಗಿದು ಹಳದಿ ಹೊಗೆ ಬಿಡುಗಡೆ ಮಾಡುವುದರೊಂದಿಗೆ ಘೋಷಣೆಗಳನ್ನು ಕೂಗಿದರು.
ಅದೇ ಸಮಯದಲ್ಲಿ, ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಎಂಬುವವರು ಸಂಸತ್ ಹೊರಗೆ, ಹಳದಿ ಹೊಗೆಯನ್ನು ಬಿಡುಗಡೆ ಮಾಡುವುದರ ಜೊತೆಗೆ ಸರ್ವಾಧಿಕಾರವನ್ನು ಅನುಮತಿಸಲಾಗುವುದಿಲ್ಲ ಎಂಬ ಘೋಷಣೆಗಳನ್ನು ಕೂಗಿದರು. ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದರು.