ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದ ದುರ್ಗಾ ಪೂಜೆ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯನ್ನು ನೇಪಾಳ ಗಡಿಯ ಬಳಿ ಎನ್‌ಕೌಂಟರ್ ಮಾಡಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಸರ್ಫರಾಜ್ ಪರಾರಿಯಾಗಲು ಯತ್ನಿಸುತ್ತಿದ್ದು, ಪೊಲೀಸರು ಎನ್‌ಕೌಂಟರ್ ಮಾಡಿ ಬಳಿಕ ಬಂಧಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಆತ ಮತ್ತು ಆತನ ಸಹ ಆರೋಪಿ ತಾಲಿಬ್ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ದುರ್ಗಾ ದೇವಿ ಮೆರವಣಿಗೆ ವೇಳೆ ಹಿಂಸಾಚಾರ: ಓರ್ವ ಯುವಕ ಸಾವು
ಭಾನುವಾರ ಸಂಜೆ ಮನ್ಸೂರ್ ಗ್ರಾಮದ ಮಹರಾಜ್‌ಗಂಜ್ ಪ್ರದೇಶದಲ್ಲಿ ಘರ್ಷಣೆ ಪ್ರಾರಂಭವಾಗಿದೆ. ದುರ್ಗಾ ಪೂಜೆ ಬಳಿಕ ಮರವಣಿಗೆ ವೇಳೆ ಧ್ವನಿವರ್ಧಕದಲ್ಲಿ ಸಂಗೀತ ಹಾಕುವ ವಿಚಾರದಲ್ಲಿ ವಾಗ್ವಾದ ಆರಂಭವಾಗಿದೆ.
ಬಳಿಕ ವಾಗ್ವಾದವು ಹಿಂಸಾಚಾರಕ್ಕೆ ತಿರುಗಿದ್ದು, ಕಲ್ಲು ತೂರಾಟ ಮತ್ತು ಗುಂಡಿನ ದಾಳಿ ನಡೆದಿದೆ. ಈ ಹಿಂಸಾಚಾರದಲ್ಲಿ ಆರು ಮಂದಿ ಗಾಯಗೊಂಡರೆ, ಓರ್ವ ಗಾಯಾಳು ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ದುರ್ಗಾ ಪೂಜೆ ನಡುವೆಯೂ ಆಮರಣಾಂತ ಉಪವಾಸ ಮುಂದುವರಿಸಿದ ವೈದ್ಯರು
ರೆಹುವಾ ಮನ್ಸೂರ್ ಗ್ರಾಮದ ನಿವಾಸಿ ರಾಮ್ ಗೋಪಾಲ್ ಮಿಶ್ರಾ ಅವರ ಕುಟುಂಬವು ಮೃತದೇಹದ ಅಂತ್ಯಸಂಸ್ಕಾರ ನಡೆಸಲು ನಿರಾಕರಿಸಿ ಧರಣಿ ಸತ್ಯಾಗ್ರಹ ನಡೆಸಿತ್ತು. ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಅಂತ್ಯಸಂಸ್ಕಾರ ನಡೆಸಿದ್ದಾರೆ.
ಇದಾದ ಮರುದಿನವೇ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಿದೆ. ಸ್ಥಳದಲ್ಲಿ ಪೊಲೀಸ್ ಭದ್ರತೆ ಅಧಿಕಗೊಳಿಸಲಾಗಿದ್ದು, ಈ ಪ್ರಕರಣದಲ್ಲಿ 30ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.
