ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಹೊತ್ತಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ ವಿ ಆನಂದ್ ಬೋಸ್ ಅವರು ರಾಜೀನಾಮೆ ನೀಡಬೇಕೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ರಾಜ್ಯಪಾಲರ ವಿರುದ್ಧ ಕೋಲ್ಕತ್ತಾ ಪೊಲೀಸರು ತನಿಖೆಯನ್ನು ಮುಂದುವರೆಸುತ್ತಿದ್ದು, ಆರೋಪಿ ಸ್ಥಾನದಲ್ಲಿರುವ ಅವರು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥನ ಹುದ್ದೆಯಲ್ಲಿ ಮುಂದುವರಿಯದೆ ರಾಜ ಭವನಕ್ಕೂ ಕೂಡ ಭೇಟಿ ನೀಡಬಾರದು ಎಂದು ಹೇಳಿದರು.
ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಅವರು, ತಾನು ರಾಜ್ಯಪಾಲರ ಪಕ್ಕದಲ್ಲಿ ಕುಳಿತರೆ ಅದು ಪಾಪಕ್ಕೆ ಸಮಾನವಾಗುತ್ತದೆ. ರಾಜ್ಯಪಾಲರು ತಮ್ಮ ವಿರುದ್ಧ ಇಂತಹ ಆರೋಪಗಳು ಕೇಳಿ ಬಂದರೂ ತಾವು ಏಕೆ ರಾಜೀನಾಮೆ ನೀಡಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಮತಾ ತಿಳಿಸಿದರು.
“ನಿಮ್ಮನ್ನು ಏನೆಂದು ಭಾವಿಸಿಕೊಂಡಿದ್ದೀರಿ? ಮಹಿಳೆಗೆ ಏಕೆ ಚಿತ್ರಹಿಂಸೆ ನೀಡಿದ್ದೀರಿ. ರಾಜ್ಯಪಾಲರು ಹೇಳುತ್ತಾರೆ ‘ದೀದಿಗಿರಿ’ಯನ್ನು ಸಹಿಸಿಕೊಳ್ಳುವುದಿಲ್ಲ. ನಾನು ಹೇಳುತ್ತೇನೆ ನಿಮ್ಮ ದಾದಾಗಿರಿ ಇಲ್ಲಿ ಕೆಲಸ ಮಾಡುವುದಿಲ್ಲ” ಎಂದು ರಾಜ್ಯಪಾಲರ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?
“ರಾಜ್ಯಪಾಲರು ತಿರುಚಿದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ನಾನು ಪೂರ್ಣ ದೃಶ್ಯ ನೋಡಿದ್ದೇನೆ. ಇದು ಆಘಾತಕಾರಿ ದೃಶ್ಯಗಳನ್ನು ಒಳಗೊಂಡಿದೆ. ಸತ್ಯ ಇನ್ನಷ್ಟೇ ಹೊರಬರಬೇಕಿದೆ. ನಾನು ಇನ್ನೊಂದು ವಿಡಿಯೋವನ್ನು ನೋಡಿದ್ದು, ನಿಮ್ಮ ನೆಡವಳಿಕೆ ನಾಚಿಕೆಗೇಡು. ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವವರೆಗೂ ನಾನು ರಾಜಭವನಕ್ಕೆ ಭೇಟಿ ನೀಡುವುದಿಲ್ಲ” ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದ 361(2) ಹಾಗೂ (3) ವಿಧಿಯ ಅನ್ವಯ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ವಿರುದ್ಧ ಯಾವುದೇ ಅಪರಾಧಿ ವಿಚಾರಣೆಗಳು ಎದುರಾದರೆ ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯುವಂತೆ ವಿನಾಯಿತಿ ನೀಡಿದೆ.
ಆದಾಗ್ಯೂ ಕೋಲ್ಕತ್ತಾ ಪೊಲೀಸ್ ಮಹಿಳೆಯ ವಿರುದ್ಧ ದೂರುಗಳನ್ನು ಸ್ವೀಕರಿಸಿದ್ದು, ಆದರೆ ಯಾವುದೇ ವ್ಯಕ್ತಿಯ ವಿರುದ್ಧ ವಿಚಾರಣೆಯನ್ನು ಗುರಿಪಡಿಸಿಲ್ಲ.
ರಾಜ್ಯಪಾಲರು ರಾಜಭವನಕ್ಕೆ ಪೊಲೀಸ್ ಸಿಬ್ಬಂದಿ ಬರುವುದನ್ನು ಮೇ.2ರಿಂದ ನಿಷೇಧಿಸಿದ್ದಾರೆ. ಪೊಲೀಸರಿಗೆ ಸಹಕರಿಸಬೇಡಿ ಹಾಗೂ ಸಿಸಿಟಿವಿ ದೃಶ್ಯಗಳನ್ನು ನೀಡಬೇಡಿ ಎಂದು ರಾಜ್ಯಪಾಲರು ತಿಳಿಸಿದ್ದಾರೆ ಎನ್ನಲಾಗಿದೆ.
