ಕಳ್ಳತನ ಮಾಡಿದ್ದಾರೆಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ದುಷ್ಟರ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದ್ದು, ಸಂತ್ರಸ್ತ ದೇಹದ 40 ಮೂಳೆಗಳು ಮುರಿದಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಆಗ್ಗಾಗ್ಗೆ ಹಲ್ಲೆ, ಕೊಲೆಯಂತಹ ಗಂಭೀರ ಘಟನೆಗಳು ವರದಿಯಾಗುತ್ತಿವೆ. ಇದೀಗ, ಇಂದೋರ್‌ನ ಆಜಾದ್ ನಗರದಲ್ಲಿ ಅಮಾನವೀಯ ಘಟನೆ ನಡೆದಿದ್ದು, ದುಷ್ಟರ ಗುಂಪು ವ್ಯಕ್ತಿಯನ್ನು ಹೊಡೆದು ಕೊಂದಿದೆ. ಮೃತನನ್ನು ಉಮೇಂದ್ರ ಸಿಂಗ್ ಠಾಕೂರ್ (28) ಎಂದು ಗುರುತಿಸಲಾಗಿದೆ.
ಇಂದೋರ್‌ನಲ್ಲಿ ಸೇತುವೆ ನಿರ್ಮಾಣ ಕಾಮಕಾರಿ ನಡೆಯುತ್ತಿದ್ದು, ಕಾಮಗಾರಿಗೆ ಬಳಸುವ ಅಗತ್ಯ ಸಾಮಗ್ರಿಗಳನ್ನು ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ ಇರಿಸಲಾಗಿತ್ತು. ಅಲ್ಲಿದ್ದ ಕಬ್ಬಿಣದ ಸರಳಗಳನ್ನು ಉಮೇಂದ್ರ ಠಾಕೂರ್ ಕದಿಯಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆ ಕಾರಣಕ್ಕಾಗಿಯೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಆತನ ಮೇಲೆ ಭೀಕರ ಹಲ್ಲೆ ನಡೆಸಿದ್ದಾರೆ.
ಈ ಲೇಖನ ಓದಿದ್ದೀರಾ?: ಎಲ್ಲ ರಾಜ್ಯಗಳಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ: ಇದು ಪರೋಕ್ಷ NRC, CAA ಜಾರಿ ಅಲ್ಲವೇ?
ಗಂಭೀರವಾಗಿ ಗಾಯಗೊಂಡಿದ್ದ ಉಮೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತನ ದೇಹದಲ್ಲಿ ಸುಮಾರು 40 ಮೂಳೆಗಳು ಮುರಿದಿವೆ ಎಂಬುದು ಗೊತ್ತಾಗಿದೆ.
ಭೀಕರ ಹಲ್ಲೆಯಿಂದಾಗಿ ಆತ ಕೈಗಳು, ಕಾಲುಗಳು ಹಾಗೂ ಪಕ್ಕೆಲುಬುಗಳು ಮುರಿದಿವೆ. ದೇಹದ ಅನೇಕ ಸ್ಥಳಗಳಲ್ಲಿ ಮೂಳೆಗಳು ಮುರಿದುಹೋಗಿವೆ. ದೇಹದ ಒಳಗೆ ರಕ್ತಸ್ರಾವವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕೃತ್ಯ ಎಸಗಿರುವ ಆರೋಪಿಗಳನ್ನು ಗುರುತಿಸಿದ್ದು, ಅವರ ಬಂಧನಕ್ಕೆ ಹುಟುಕಾಟ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.