ಸ್ನೇಹಿತನೊಂದಿಗೆ ವಾಗ್ವಾದ ನಡೆದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಸ್ನೇಹಿತನ ಕಿವಿ ಕಚ್ಚಿ, ಬಾಯಿಗೆ ಬಂದ ಮಾಂಸವನ್ನು ನುಂಗಿದ ಘಟನೆಯು ಥಾಣೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಇಬ್ಬರು ಸ್ನೇಹಿತರ ನಡುವೆ ಯಾವುದೋ ಒಂದು ವಿಚಾರಕ್ಕೆ ವಾಗ್ವಾದ ನಡೆದಿದ್ದು, ಓರ್ವ ಸಿಟ್ಟಿಗೆದ್ದು ಇನ್ನೋರ್ವನ ಕಿವಿ ಕಚ್ಚಿದ್ದಾನೆ, ಬಳಿಕ ಬಾಯಲ್ಲಿದ್ದ ಕಿವಿಯ ತುಂಡನ್ನು ನುಂಗಿದ್ದಾನೆ ಎಂದು ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ನರಭಕ್ಷಕ ಹುಲಿ ಹೊಟ್ಟೆಯಲ್ಲಿ ಮಹಿಳೆಯ ಕೂದಲು, ಬಟ್ಟೆಯ ತುಂಡು, ಕಿವಿ ಓಲೆ ಪತ್ತೆ
ಥಾಣೆಯ ಪಟ್ಲಿಪಾದ ವಸತಿ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ಕಾಸರ್ವಾದಾವಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಶ್ರವಣ್ ಲೀಖಾ (37) ಎಂಬ ವ್ಯಕ್ತಿ ದೂರು ನೀಡಿದ್ದಾರೆ. “ವಿಕಾಸ್ ಮೆನನ್ (32) ಮತ್ತು ನನ್ನ ನಡುವೆ ಒಂದು ಕಾರ್ಯಕ್ರಮದಲ್ಲಿ ವಾಗ್ವಾದ ನಡೆದಿದೆ. ಮೆನನ್ ಒಮ್ಮೆಲೆ ಹಿಂಸೆಗೆ ತಿರುಗಿ ನನ್ನ ಕಿವಿಯ ಒಂದು ಭಾಗವನ್ನು ಕಚ್ಚಿದ್ದಾನೆ, ಬಳಿಕ ಅದನ್ನು ನುಂಗಿದ್ದಾನೆ” ಎಂದು ಶ್ರವಣ್ ಆರೋಪಿಸಿದ್ದಾರೆ.
ಕೂಡಲೇ ಆಸ್ಪತ್ರೆಗೆ ಧಾವಿಸಿದ ಶ್ರವಣ್ ಚಿಕಿತ್ಸೆ ಪಡೆದುಕೊಂಡಿದ್ದಾಗಿ ಹೇಳಿದ್ದಾರೆ. ಶ್ರವಣ್ ದೂರಿನ ಆಧಾರದಲ್ಲಿ ಮೆನನ್ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 117 (2) ಅಡಿಯಲ್ಲಿ ದೂರು ದಾಖಲಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
