ವ್ಯಕ್ತಿಯೊಬ್ಬರು ಹಲವಾರು ದೂರು ಪತ್ರಗಳನ್ನು ದಾರದೊಂದಿಗೆ ಹೆಣೆದುಕೊಂಡು, ಅದನ್ನು ತಮ್ಮ ದೇಹಕ್ಕೆ ಕಟ್ಟಿಕೊಂಡು ವಿಭಾಗೀಯ ಆಯುಕ್ತರ ಕಚೇರಿಗೆ ತೆವಳುತ್ತಾ ಬಂದು ಪ್ರತಿಭಟನೆ ನಡೆಸಿರುವ ಘಟನೆ ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ನಡೆದಿದೆ.
ಹೋರ್ ಜಿಲ್ಲೆಯ ಬಿಷಂಖೇಡಿ ಗ್ರಾಮದ ನಿವಾಸಿ ಬಜರಂಗಿ ಎಂಬವರು ತಮ್ಮ ಗ್ರಾಮದ ಸಮಸ್ಯೆಗಳ ಕುರಿತು ಎಷ್ಟು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸದ ಕಾರಣ, ಅವರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ತಮ್ಮ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ತಮ್ಮ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಈ ರೀತಿ ಪ್ರತಿಭಟನೆ ನಡೆಸಿರುವುದಾಗಿ ಬಜರಂಗಿ ಹೇಳಿಕೊಂಡಿದ್ದಾರೆ.
“ನಾನು ನನ್ನ ಗ್ರಾಮಕ್ಕೆ ನೀರು ಪಡೆಯುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನಾವು ಜಿಲ್ಲಾಧಿಕಾರಿ, ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ಪದೇ ಪದೇ ಮನವಿ ಸಲ್ಲಿಸಿದ್ದೇವೆ. ಆದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಧಿಕಾರಿಗಳ ನಿಷ್ಕ್ರಿಯತೆಯಿಂದ ಹತಾಶೆಗೊಂಡು ನಮ್ಮ ಮನವಿ ಪತ್ರಗಳು ಮತ್ತು ದೂರು ಪತ್ರಗಳನ್ನು ದಾರದಲ್ಲಿ ಹೆಣೆದು, ದೇಹಕ್ಕೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದೇನೆ” ಎಂದು ಹೇಳಿದ್ದಾರೆ.
Villagers Protest Uniquely Against Water Crisis in Sehore Madhya Pradesh pic.twitter.com/7KIFuvUNfV
— Hello (@RishiSharm69371) April 2, 2025
ಆದಾಗ್ಯೂ, ಅಧಿಕಾರಿಗಳು ಬಜರಂಗಿಯವರ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಗ್ರಾಮದಲ್ಲಿ ಮುದಾಯ ಕೇಂದ್ರದ ಬಳಿ ಮಾತ್ರ ನೀರಿನ ಕೊರತೆ ಕಂಡುಬಂದಿದೆ. ಈ ಸಮಸ್ಯೆಯನ್ನು ಪರಿಹರಿಸಲು, ಅಧಿಕಾರಿಗಳು ಬೋರ್‌ವೆಲ್ ಕೊರೆಸಲಾಗಿದ್ದು, ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಲು ಪಂಪ್ ಅಳವಡಿಸಿದ್ದಾರೆ ಎಂದು ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರದೀಪ್ ಸಕ್ಸೇನಾ ಹೇಳಿದ್ದಾರೆ.
2,100 ನಿವಾಸಿಗಳಿರುವ ಈ ಗ್ರಾಮದಲ್ಲಿ 20 ಕೈ ಪಂಪ್‌ಗಳಿದ್ದು, ಅವುಗಳಲ್ಲಿ 12 ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, ಹೆಚ್ಚಿನ ಮನೆಗಳು ತಮ್ಮದೇ ಆದ ನೀರಿನ ಮೂಲಗಳನ್ನು ಹೊಂದಿದ್ದಾರೆ ಎಂದು ಸಕ್ಸೇನಾ ತಿಳಿಸಿದ್ದಾರೆ.
ಮಧ್ಯಪ್ರದೇಶವು ಈ ಹಿಂದೆಯೂ ಇದೇ ರೀತಿಯ ವಿನೂತನ ಪ್ರತಿಭಟನೆಗಳನ್ನು ಕಂಡಿದೆ. ಕಳೆದ ವರ್ಷ ಜುಲೈನಲ್ಲಿ, ಮಂಡ್ಸೌರ್‌ನಲ್ಲಿ ವೃದ್ಧ ರೈತರೊಬ್ಬರು ತಮ್ಮ ಭೂಮಿಯನ್ನು ಕೆಲವರು ಕಬಳಿಸಿಕೊಂಡಿದ್ದಾರೆಂದು ದೂರು ನೀಡಿದರೂ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲವೆಂದು ಉರುಳುಸೇವೆ ಪ್ರತಿಭಟನೆ ಮಾಡಿದ್ದರು. ಡಿಸೆಂಬರ್‌ನಲ್ಲಿ, ಮತ್ತೊಬ್ಬ ರೈತ ದೇವಾಸ್‌ನಲ್ಲಿರುವ ತನ್ನ ಭೂ ವಿವಾದವನ್ನು ಪರಿಹರಿಸುವಲ್ಲಿ ಮ್ಯಾಜಿಸ್ಟ್ರೇಟ್ ಕಚೇರಿಯ ವಿಳಂಬವನ್ನು ಖಂಡಿಸಿ ತನ್ನ ಕುಟುಂಬದೊಂದಿಗೆ ಮೊಣಕಾಲುಗಳ ಮೇಲೆ ನಡೆದು ಗಮನ ಸೆಳೆದಿದ್ದರು.