ತಾನು ಕೊರಿಯರ್ ಡೆಲಿವರಿ ಏಜೆಂಟ್ ಎಂದು ಹೇಳಿಕೊಂಡು ಮನೆಯ ಒಳಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಪುಣೆಯಲ್ಲಿ ನಡೆದಿದೆ. ಆರೋಪಿಯು ಅತ್ಯಾಚಾರ ಸಂತ್ರಸ್ತೆ 22 ವರ್ಷದ ಐಟಿ ಉದ್ಯೋಗಿಯಾಗಿರುವ ಯುವತಿಯ ಮೊಬೈಲ್‌ನಲ್ಲೇ ತನ್ನ ಅರ್ಧ ಮುಖ ಕಾಣುವಂತೆ ವಿಡಿಯೋ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಉಪ ಪೊಲೀಸ್ ಆಯುಕ್ತ (ವಲಯ 5) ರಾಜ್‌ಕುಮಾರ್ ಶಿಂದೆ, “ಆರೋಪಿ ಸಂತ್ರಸ್ತೆ ಮೊಬೈಲ್‌ನಲ್ಲೇ ತನ್ನ ಮುಖ ಭಾಗಶಃ ಕಾಣುವಂತೆ, ಸಂತ್ರಸ್ತೆಯ ಬೆನ್ನು ಕಾಣುವಂತೆ ಸೆಲ್ಫಿ ತೆಗೆದಿದ್ದಾನೆ. ಅಪರಾಧದ ಬಗ್ಗೆ ಯಾರಿಗೂ ತಿಳಿಸದಂತೆ ಎಚ್ಚರಿಸಿದ್ದಾನೆ. ಯಾರಿಗಾದರೂ ತಿಳಿಸಿದರೆ ವಿಡಿಯೋ, ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ. ‘ನಾನು ಮತ್ತೆ ಬರುತ್ತೇನೆ’ ಎಂದೂ ವಿಡಿಯೋದಲ್ಲಿ ಹೇಳಿದ್ದಾನೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟ ದುರುಳರು
ಮಹಾರಾಷ್ಟ್ರದ ಪುಣೆ ನಗರದ ಕೊಂಧ್ವಾ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ಬುಧವಾರ ಸಂಜೆ 7.30ರ ಸುಮಾರಿಗೆ ಈ ಘಟನೆ ನಡೆದಿದ್ದು ಸದ್ಯ ಆರೋಪಿಯ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸಂತ್ರಸ್ತೆಯ ಸಹೋದರ ಮನೆಯಲ್ಲಿ ಇರಲಿಲ್ಲ. ಆಕೆ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಳೇ ಇದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆ ವ್ಯಕ್ತಿ ಬ್ಯಾಂಕ್ ಸಂಬಂಧಿತ ದಾಖಲೆಯೊಂದಿಗೆ ಕೊರಿಯರ್ ಡೆಲಿವರಿ ಏಜೆಂಟ್ ಎಂದು ಹೇಳಿಕೊಂಡು ಆಕೆಯ ಮನೆಯೊಳಗೆ ಬಂದಿದ್ದಾನೆ. ದಾಖಲೆ ಸಹಿ ಮಾಡಲು ಪೆನ್ನು ಕೇಳಿದ್ದಾನೆ. ಆಕೆ ಪೆನ್ನು ತರಲು ಒಳ ಹೋದಾಗ ಆತ ಮನೆಯೊಳಗೆ ನುಗ್ಗಿ ಚಿಲಕ ಹಾಕಿದ್ದಾನೆ. ಯುವತಿಗೆ ಪ್ರಜ್ಞೆ ತಪ್ಪಿದ್ದು ಎಚ್ಚರವಾದಾಗ ಏನೂ ನೆನಪಿರಲಿಲ್ಲ. ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿ, ಪೊಲೀಸರಿಗೆ ತಿಳಿಸಿದ್ದಾಳೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶಂಕಿತನ ರೇಖಾಚಿತ್ರ ಸಿದ್ಧಪಡಿಸಲು ಪ್ರಯತ್ನಿಸಲಾಗುತ್ತಿದೆ. ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಹಾಗೆಯೇ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸುತ್ತಿದ್ದಾರೆ.
