ಸೋಂಕಿಗೆ ಚಿಕಿತ್ಸೆಗಾಗಿ ಬಂದಿದ್ದ ಯುವಕ ಆತನ ಒಪ್ಪಿಗೆ ಇಲ್ಲದೆ, ವೈದ್ಯರು ಆತನ ಜನನಾಂಗವನ್ನೇ ಕತ್ತರಿಸಿರುವ ಘಟನೆ ಅಸ್ಸಾಂನ ಕ್ಯಾಚರ್ ಜಿಲ್ಲೆಯಲ್ಲಿ ನಡೆದಿದೆ. ಬಯಾಪ್ಸಿ ಪರೀಕ್ಷೆಯ ವೇಳೆ, ವೈದ್ಯರು ಯುವಕನ ಜನನಾಂಗವನ್ನು ತೆಗೆದುಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಮಣಿಪುರದ ಜಿರಿಬಮ್ ಮೂಲದ 28 ವರ್ಷದ ಯುವಕ ಅತಿಕುರ್ ರೆಹಮಾನ್ ಮೂತ್ರನಾಳ ಸೋಂಕಿನಿಂದ ಬಳಲುತ್ತಿದ್ದರು. ಸೋಂಕಿಗೆ ಚಿಕಿತ್ಸೆ ಪಡೆಯಲು ಕ್ಯಾಚರ್ ಜಿಲ್ಲೆಯ ಸಿಲ್ಚಾರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ, ಆತನಿಗೆ ಬಯಾಪ್ಸಿ ಪರೀಕ್ಷೆ ನಡೆಸಲಾಗಿದೆ. ಬಳಿಕ, ಆತನ ಒಪ್ಪಿಗೆಯೇ ಇಲ್ಲದೆ ವೈದ್ಯರು ಆತನ ಜನನಾಂಗವನ್ನು ಕತ್ತರಿಸಿದ್ದಾರೆ.
ಯುವಕನಿಗೆ ಪ್ರಜ್ಞೆ ಬಂದಾಗ, ತನ್ನ ಜನನಾಂಗವನ್ನು ವೈದ್ಯರು ತೆಗೆದುಹಾಕಿರುವುದು ಗೊತ್ತಾಗಿದೆ. ಸಂತ್ರಸ್ತ ಯುವಕ ಆಸ್ಪತ್ರೆಯ ವಿರುದ್ಧ ಅಸ್ಸಾಂ ಸರ್ಕಾರ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.
“ಜನನಾಂಗ ಸೋಂಕಿನಿಂದಾಗಿ ಜೂನ್ 19 ರಂದು ನಾನು ಸಿಲ್ಚಾರ್‌ನ ಖಾಸಗಿ ಆಸ್ಪತ್ರೆಗೆ ಹೋಗಿದ್ದೆ. ವೈದ್ಯರು ಬಯಾಪ್ಸಿ ಪರೀಕ್ಷೆ ಮಾಡಿಸಲು ಸಲಹೆ ನೀಡಿದರು. ನನ್ನ ಬಯಾಪ್ಸಿ ಪರೀಕ್ಷೆಯ ಸಮಯದಲ್ಲಿ, ಅವರು ನನ್ನ ಒಪ್ಪಿಗೆಯಿಲ್ಲದೆ ಶಸ್ತ್ರಚಿಕಿತ್ಸೆಯ ಮೂಲಕ ನನ್ನ ಜನನಾಂಗವನ್ನು ತೆಗೆದುಹಾಕಿದ್ದಾರೆ. ನಾನು ಎಚ್ಚರವಾದಾಗ, ನನ್ನ ಜನನಾಂಗವನ್ನು ತೆಗೆದುಹಾಕಲಾಗಿದೆ ಎಂಬುದು ನನಗೆ ಗೊತ್ತಾಯಿತು. ನಾನು ವೈದ್ಯರನ್ನು ಕೇಳಿದಾಗ, ಅವರು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ” ಎಂದು ಸಂತ್ರಸ್ತ ಅತಿಕುರ್ ರೆಹಮಾನ್ ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸುವುದರಿಂದ ಉಂಟಾಗುವ ಬಿಕ್ಕಟ್ಟುಗಳೇನು ಬಲ್ಲಿರಾ?
“ಈಗ, ನಾನು ಅಸಹಾಯಕನಾಗಿದ್ದೇನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನನ್ನ ಜೀವನ ಹಾಳಾಗಿಹೋಗಿದೆ. ನಾನು ವೈದ್ಯರನ್ನು ಹಲವಾರು ಬಾರಿ ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಅವರು ನನ್ನ ಫೋನ್ ಕರೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ. ನಾನು ಮಾನಸಿಕವಾಗಿ ನೊಂದಿದ್ದೇನೆ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತುರ್ತಾಗಿ ಮಧ್ಯಪ್ರವೇಶಿಸಿ, ನನಗೆ ನ್ಯಾಯಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.