ಮದುವೆಯಾಗುವುದಕ್ಕೆ ನಿರಾಕರಿಸಿದ್ದಕ್ಕೆ ಯುವಕನೋರ್ವ ಯುವತಿಯ ಕತ್ತು ಸೀಳಿ ಕೊಂದಿರುವ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಜ್ಯೋತಿರ್‌ಮಾಯೆ ರಾಣಾ (25) ಎಂದು ಗುರುತಿಸಲಾಗಿದೆ. ಲಿಂಗಪಾದ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
“ನನ್ನ ಮಗಳಿಗೆ ಯುವಕನೋರ್ವ ಪೀಡಿಸುತ್ತಿದ್ದ, ಈ ಬಗ್ಗೆ ಮೂರು ದಿನಗಳ ಹಿಂದೆ ಸೊರೊ ಪೊಲೀಸ್ ಠಾಣೆಯಲ್ಲಿ ನನ್ನ ಮಗಳು ದೂರು ನೀಡಿದ್ದಾಳೆ” ಎಂದು ಮೃತ ಯುವತಿಯ ತಾಯಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹಾಸನ | ಮದುವೆಗೆ ನಿರಾಕರಿಸಿದ ಪ್ರೇಯಸಿ; ವಿಷಸೇವಿಸಿ ಯುವಕ ಆತ್ಮಹತ್ಯೆ
“ನಮ್ಮ ಮನೆಗೆ ಇತ್ತೀಚೆಗೆ ಯುವಕನೋರ್ವ ಪದೇ ಪದೇ ಬಂದು ನನ್ನ ಮಗಳ ಜೊತೆ ಆತನ ವಿವಾಹ ಮಾಡುವಂತೆ ಒತ್ತಾಯಿಸುತ್ತಿದ್ದ. ನಾನು ಈ ಮದುವೆ ಪ್ರಸ್ತಾಪವನ್ನು ನಿರಾಕರಿಸಿದೆ. ಆತನೇ ನನ್ನ ಮಗಳನ್ನು ಕೊಂದಿದ್ದಾನೆ” ಎಂದು ತಾಯಿ ದೂರಿದ್ದಾರೆ.
ಇನ್ನು ಈ ನಡುವೆ ಮಾಜಿ ಪೊಲೀಸ್ ಅಧಿಕಾರಿ ವರ್ಗಾವಣೆಯಾದ ನಂತರ ಸೊರೊ ಪೊಲೀಸ್ ಠಾಣೆಗೆ ಪ್ರಸ್ತುತ ಯಾವುದೇ ಉಸ್ತುವಾರಿ ಅಧಿಕಾರಿ ಇಲ್ಲ ಎಂದು ವರದಿಯಾಗಿದೆ.
ಘಟನೆಯ ನಂತರ ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
