ಇಂದು (ಡಿ.13) ಲೋಕಸಭೆ ಗ್ಯಾಲರಿಯಿಂದ ಇಬ್ಬರು ಅಪರಿಚಿತರು ಜಿಗಿದು ಆತಂಕ ಸೃಷ್ಟಿಸಿದ್ದಾರೆ. ಕಲಾಪ ನಡೆಯುತ್ತಿರುವಾಗಲೇ ಇಬ್ಬರು ವಿದ್ಯಾರ್ಥಿಗಳು ಜಿಗಿದಿರುವುದರಿಂದ ಕೆಲ ಕಾಲ ಸದನದಲ್ಲಿದ್ದ ಸಂಸದರು ಆತಂಕಕ್ಕೆ ಒಳಗಾಗಿದ್ದರು.
ಇಬ್ಬರು ಯುವಕರು ಲೋಕಸಭೆ ಸದನಕ್ಕೆ ಜಿಗಿದು ಟಿಯರ್ ಗ್ಯಾಸ್ ರೀತಿಯ ಸ್ಪೋಟಕವನ್ನು ಎಸೆದು ಆತಂಕ ಉಂಟು ಮಾಡಿದರು.
ಸದನದಲ್ಲಿದ್ದ ಸಂಸದರು ಇಬ್ಬರು ವಿದ್ಯಾರ್ಥಿಗಳನ್ನು ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಮೈಸೂರು ಮೂಲದ ಮನೋರಂಜನ್ ಹಾಗೂ ಮತ್ತೊಬ್ಬ ಉತ್ತರ ಪ್ರದೇಶದ ಲಖನೌ ಮೂಲದ ಸಾಗರ್ ಶರ್ಮಾ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸಂಸದ ಡ್ಯಾನಿಶ್ ಅಲಿ, “ದಾಳಿ ನಡೆಸಿದ ಯುವಕರ ಪೈಕಿ ಓರ್ವ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದಿದ್ದರು” ಎಂದು ಮಾಹಿತಿ ನೀಡಿದ್ದಾರೆ.
2016ರಲ್ಲಿ ನಡೆದಿದ್ದ ಘಟನೆ
ಇದೇ ರೀತಿಯ ಲೋಕಸಭೆಗೆ ನುಗ್ಗಿದ ಘಟನೆ 2016ರಲ್ಲೂ ನಡೆದಿತ್ತು. ಹಳೆಯ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ 2016ರ ನವೆಂಬರ್ 25 ರಂದು ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ವ್ಯಕ್ತಿಯೊಬ್ಬರು ಸದನಕ್ಕೆ ಜಿಗಿಯಲು ಪ್ರಯತ್ನಿಸಿದ್ದರು.
ಈ ಸುದ್ದಿ ಓದಿದ್ದೀರಾ? ಲೋಕಸಭೆಯಲ್ಲಿ ಭದ್ರತಾಲೋಪ | ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೆಸರಲ್ಲಿ ಪಾಸ್ ಪಡೆದಿದ್ದ ಅಪರಿಚಿತರು
ಬುಲಂದ್‌ಶಹರ್‌ನ ಬಿಜೆಪಿ ಸಂಸದ ಭೋಲಾ ಸಿಂಗ್ ಅವರ ಪಾಸ್ ಪಡೆದು ರಾಕೇಶ್ ಸಿಂಗ್ ಬಘೇಲ್ ಎಂಬಾತ ಅಂದು ಸಂಸತ್ತಿಗೆ ಪ್ರವೇಶಿಸಿ ಗ್ಯಾಲರಿಯಿಂದ ಜಿಗಿಯಲು ಪ್ರಯತ್ನಿಸಿದ್ದ. ಪೊಲೀಸರು ಆತನ ಯತ್ನವನ್ನು ವಿಫಲಗೊಳಿಸಿ ಬಂಧಿಸಿದ್ದರು.
ಈ ಘಟನೆ ನಡೆದ ನಂತರ ಲೋಕಸಭೆ ಆಗಿನ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸದನವನ್ನು ಮುಂದೂಡಿದ್ದರು. ರಾಕೇಶ್ ಸಿಂಗ್ ಬಘೇಲ್ ಅಂದು ಬೆಳಗ್ಗೆ 11.20 ರ ಸುಮಾರಿಗೆ ಸದನಕ್ಕೆ ಜಿಗಿಯಲು ಪ್ರಯತ್ನಿಸಿದ್ದರು. ಅವರನ್ನು ಭದ್ರತಾ ಸಿಬ್ಬಂದಿ ವಿಚಾರಣೆಗಾಗಿ ಕರೆದೊಯ್ದರು.
ಅಂದು ನುಗ್ಗಿದ್ದ ಬಘೇಲ್ ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯವರು ಎಂದು ಸ್ಪೀಕರ್ ಮಹಾಜನ್ ಸದನಕ್ಕೆ ತಿಳಿಸಿದ್ದರು.
ಸಂಸತ್ ದಾಳಿಯ 22ನೇ ವಾರ್ಷಿಕೋತ್ಸವದಂದೇ ಇಂದು ಇಬ್ಬರು ಯುವಕರು ಸಂಸತ್‌ಗೆ ಜಿಗಿದಿದ್ದಾರೆ. ಲೋಕಸಭೆಯಲ್ಲಿ ಭದ್ರತಾ ಲೋಪದ ಕುರಿತು ವಿಪಕ್ಷ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದು, ತೀವ್ರ ತನಿಖೆಗೆ ಸ್ಪೀಕರ್ ಅವರಿಗೆ ಆಗ್ರಹಿಸಿದ್ದಾರೆ.
ಡಿಸೆಂಬರ್ 13 ರಂದು, 2001 ರಲ್ಲಿ ಸಂಸತ್ತಿನ ಮೇಲೆ ಉಗ್ರರು ದಾಳಿ ನಡೆಸಿದ್ದರು. ಸದನದೊಳಗೆ ನುಗ್ಗಲು ಯತ್ನಿಸಿದ ಉಗ್ರರ ಯತ್ನವನ್ನು ಭದ್ರತಾ ಸಿಬ್ಬಂದಿ ವಿಫಲಗೊಳಿಸಿದ್ದರು.