ಆಘಾತಕಾರಿ ಘಟನೆಯೊಂದರಲ್ಲಿ ದಲಿತ ಸಮುದಾಯದ ಕಾರ್ಮಿಕನೊಬ್ಬನ ಮೇಲೆ ಮಾಲೀಕನೊಬ್ಬ ಮೂತ್ರ ವಿಸರ್ಜಿಸಿದ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ಭಾನುವಾರ(ಜೂ.03) ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ಮಲಗಿದ್ದ ಕಾರ್ಮಿಕ ರಾಜ್ ಕುಮಾರ್ ರಾವತ್ ಅವರ ಮುಖದ ಮೇಲೆ ಮಾಲೀಕನಾದ ಸಂಜಯ್ ಮೌರ್ಯ ಮೂತ್ರ ವಿಸರ್ಜಿಸಿದ್ದಾನೆ.
ಅಮಾನುಷ ಕೃತ್ಯ ನಡೆದ ನಂತರ ರಾವತ್ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ವಿಡಿಯೋ ಪರೀಕ್ಷಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಣದ ಹರಿವು, ಆತ್ಮಹತ್ಯೆಗಳು, ಅಧಿಕಾರಸ್ಥರು ಮತ್ತು ಬಡವರು
“ನಾವು ಈ ಪ್ರಕರಣದ ಮಾಹಿತಿಯನ್ನು ಸ್ವೀಕರಿಸಿದ್ದೇವೆ. ವಿಡಿಯೋವನ್ನು ಭಾನುವಾರ ಸ್ವೀಕರಿಸಿದ್ದೇವೆ.ಘಟನೆಯ ಬಗ್ಗೆ ಸಂತ್ರಸ್ತರರ ಕುಟುಂಬ ದೂರು ದಾಖಲಿಸಿದೆ. ನಾವು ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುತ್ತೇವೆ” ಎಂದು ಡಿಸಿಪಿ ದುರ್ಗೇಶ್ ಕುಮಾರ್ ತಿಳಿಸಿದ್ದಾರೆ.
ಇದೇ ರೀತಿಯ ಘಟನೆ ಕಳೆದ ವರ್ಷ ಜುಲೈನಲ್ಲಿ ನಡೆದು ವಿಡಿಯೋ ಕೂಡ ವೈರಲ್ ಆಗಿತ್ತು. ಮಧ್ಯ ಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ವ್ಯಕ್ತಿ ಮೇಲೆ ಬಿಜೆಪಿ ಕಾರ್ಯಕರ್ತ ಪರ್ವೇಶ್ ಕುಮಾರ್ ಮೂತ್ರ ವಿಸರ್ಜಿಸಿದ್ದ. ನಂತರ ಆರೋಪಿಯನ್ನು ಬಂಧಿಸಲಾಗಿತ್ತು.
ಘಟನೆಯು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ನಂತರ ಅಂದಿನ ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಬುಡಕಟ್ಟು ಸಮುದಾಯದ ಯುವಕನನ್ನು ಮನೆಗೆ ಕರೆಸಿ ಆತಿಥ್ಯ ನೀಡಿದ್ದರು.
