ಈ ದಿನ ಸಂಪಾದಕೀಯ | ಹಣದ ಹರಿವು, ಆತ್ಮಹತ್ಯೆಗಳು, ಅಧಿಕಾರಸ್ಥರು ಮತ್ತು ಬಡವರು

Date:

ಯಾವುದೇ ಪ್ರಕರಣವಾಗಲಿ, ಅದು ಹೊರಬಂದ ಹೊಸದರಲ್ಲಿ ಭಾರೀ ಸುದ್ದಿಯಾಗುತ್ತದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಯುದ್ಧವೇ ನಡೆದುಹೋಗುತ್ತದೆ. ಅದಕ್ಕೆ ತಕ್ಕಂತೆ ಸುದ್ದಿ ಮಾಧ್ಯಮಗಳು ಕಾವು ಕೊಟ್ಟು ಬೆಂಕಿ ಹಚ್ಚಿ ಜ್ವಲಂತ ಸಮಸ್ಯೆ ಎಂಬಂತೆ ಬಿಂಬಿಸುತ್ತವೆ. ಆದರೆ, ದಿನಗಳೆದಂತೆ ತಣ್ಣಗಾಗುತ್ತದೆ, ನೇಪಥ್ಯಕ್ಕೆ ಸರಿಯುತ್ತದೆ. ಮನುಷ್ಯರ ಮರೆವಿನ ಗುಣ, ಅಧಿಕಾರಸ್ಥರಿಗೆ ಅನುಕೂಲಕರ ವಾತಾವರಣ ನಿರ್ಮಿಸಿಕೊಡುತ್ತದೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಲೆಕ್ಕಪತ್ರ ಅಧೀಕ್ಷಕ ಚಂದ್ರಶೇಖರ್(48) ಅವರು ತಮ್ಮ ಹುಟ್ಟೂರು ಶಿವಮೊಗ್ಗದಲ್ಲಿ ಆತ್ಮಹತ್ಯೆಗೆ ಶರಣಾಗಿ ಇಲ್ಲಿಗೆ ಒಂದು ವಾರ ಕಳೆಯಿತು.

ಈ ಒಂದು ವಾರದಲ್ಲಿ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಸಮರ ನಡೆದಿದೆಯೇ ಹೊರತು, ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಗೆ ನ್ಯಾಯ ಸಿಗಲಿಲ್ಲ.

ನಿಗಮದಲ್ಲಿ ನಡೆದಿದೆ ಎನ್ನಲಾದ 94.73 ಕೋಟಿ ಮೊತ್ತದ ಅವ್ಯವಹಾರ, ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟ ಡೆತ್ ನೋಟ್ ಮೂಲಕ ಬಯಲಾಗಿದೆ. ಡೆತ್ ನೋಟ್‌ನಲ್ಲಿ ಹಗರಣದ ಕುರಿತು ಹಲವು ಮಹತ್ವದ ಮಾಹಿತಿಗಳನ್ನು ದಾಖಲಿಸಲಾಗಿದೆ. 94 ಕೋಟಿ ಸಣ್ಣ ಮೊತ್ತವಲ್ಲ, ಇದು ನಿರ್ಲಕ್ಷಿಸುವಂತಹ ಆರೋಪವಲ್ಲ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಕೂಡ ಅದನ್ನು ಅಲ್ಲಗಳೆದಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಏತನ್ಮಧ್ಯೆ, ಮೃತ ಅಧಿಕಾರಿ ಚಂದ್ರಶೇಖರ್ ಪತ್ನಿ ಶಿವಮೊಗ್ಗದಲ್ಲಿ ದೂರು ನೀಡಿದ್ದಾರೆ. ನಿಗಮದ ವತಿಯಿಂದ ಮುಖ್ಯನಿಬಂಧಕ ರಾಜಶೇಖರ್ ಬೆಂಗಳೂರು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎರಡು ಕ್ರಿಮಿನಲ್ ಮೊಕದ್ದಮೆಗಳ ಹಿನ್ನೆಲೆಯಲ್ಲಿ, ಪ್ರಕರಣದ ಗಂಭೀರತೆಯನ್ನು ಅರಿತ ಸರ್ಕಾರ, ಸಮಗ್ರ ತನಿಖೆಗಾಗಿ ಸಿಐಡಿ ಆರ್ಥಿಕ ಅಪರಾಧ ವಿಭಾಗದ ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರಗಳು, ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ, ಹಣ ದುರ್ಬಳಕೆ ಆರೋಪ ಸಂಬಂಧ ಯೂನಿಯನ್ ಬ್ಯಾಂಕ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸೇರಿದಂತೆ ಸಮಗ್ರ ತನಿಖೆ ನಡೆಸಿ ಶೀಘ್ರದಲ್ಲಿ ವರದಿ ಸಲ್ಲಿಸಬೇಕೆಂದು ಸರ್ಕಾರ ತಿಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಅಧಿಕಾರಕ್ಕೆ ಬಂದ ಬಳಿಕ ಒಂದು ವರ್ಷದ ಅವಧಿಯಲ್ಲಿ, ಮೂರು ಪ್ರತ್ಯೇಕ ಅಪರಾಧ ಪ್ರಕರಣಗಳಲ್ಲಿ ಮೂರನೇ ಎಸ್ಐಟಿ ನಿಯೋಜಿಸಿದಂತಾಗಿದೆ. ಬಿಟ್ ಕಾಯಿನ್ ಹಗರಣ, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಹಾಗೂ‌ ಇದೀಗ ವಾಲ್ಮೀಕಿ ನಿಗಮ ಲೆಕ್ಕಾಧಿಕಾರಿ ಸಾವು ಹಾಗೂ ಬಹುಕೋಟಿ ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.

ವಾಲ್ಮೀಕಿ ನಿಗಮದ ಅವ್ಯವಹಾರ ಕುರಿತ ಎಸ್ಐಟಿ ತನಿಖೆಯೂ ಚುರುಕುಗೊಂಡಿದೆ. ಇಬ್ಬರು ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದು ಕೋಟ್ಯಂತರ ರೂಪಾಯಿಗಳ ಹಣ ದುರ್ಬಳಕೆಯ ಹಗರಣ. ಈ ಭಾರೀ ಮೊತ್ತದ ಹಗರಣವನ್ನು ಒಬ್ಬರು ಅಥವಾ ಇಬ್ಬರು ಅಧಿಕಾರಿಗಳು ಸೇರಿ ಮಾಡಲು ಸಾಧ್ಯವಿಲ್ಲ ಎಂಬುದು ಎಂತಹವರಿಗೂ ಅರ್ಥವಾಗುತ್ತದೆ. ಇದರ ಸಮಗ್ರ ತನಿಖೆಯ ಅಗತ್ಯವಿದೆ. ಸತ್ಯ ಆದಷ್ಟು ಬೇಗ ಹೊರಬರಬೇಕಾಗಿದೆ. ಇಲ್ಲದಿದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಧಿಕಾರ ಸ್ಥಾನಗಳಿಂದ ಮಹಿಳೆಯರನ್ನು ಹೊರಗಿಟ್ಟು ಸಮಾನತೆ ಬಗ್ಗೆ ಮಾತನಾಡುವುದಕ್ಕೆ ಅರ್ಥವಿದೆಯೇ?

ಬಿಟ್ ಕಾಯಿನ್ ಹಗರಣ ಬಿಜೆಪಿ ಸರ್ಕಾರದ ಕೊಡುಗೆ. ಶ್ರೀಕಿ ಎಂಬ ಮಾದಕವ್ಯಸನಿ ರಾಜ್ಯ ಸರ್ಕಾರದ ಜಾಲತಾಣವನ್ನೇ ಹ್ಯಾಕ್ ಮಾಡಿ 46 ಕೋಟಿ ದೋಚಿದ್ದನೆಂಬ ಸಂಗತಿಯನ್ನು ಸಿಸಿಬಿ ಪೊಲೀಸರ ತನಿಖೆಯಿಂದ ಪತ್ತೆ ಹಚ್ಚಿದ್ದರು. ಆ ಭಾರೀ ಮೊತ್ತ ಹಲವರ ಖಾತೆಗೆ ವರ್ಗವಾಗಿದೆ. ಈ ಹಗರಣದಲ್ಲಿ ಹಲವು ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರ ಪುತ್ರರು ಶಾಮೀಲಾಗಿದ್ದಾರೆಂಬ ಸುದ್ದಿ ಇದೆ. ಹಗರಣ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು, ಪರಿಣತರ ಕೊರತೆ ಎದ್ದು ಕಾಣುತ್ತಿದೆ, ತನಿಖೆ ಕುಂಟುತ್ತಾ ಸಾಗಿದೆ. ಜೊತೆಗೆ ತಾಂತ್ರಿಕ ಹಾಗೂ ಅಂತಾರಾಷ್ಟ್ರೀಯ ವಿಚಾರಗಳಿರುವ ಕಾರಣ ತನಿಖೆಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸರ್ಕಾರವೇ ಸಮಜಾಯಿಷಿ ನೀಡಿಬಿಟ್ಟಿದೆ.

ಇನ್ನು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ ಮಾಜಿ ಪ್ರಧಾನಮಂತ್ರಿಗಳ ಮೊಮ್ಮಗನಾದ್ದರಿಂದ, ಇಲ್ಲಿ ಆರೋಪಿಯೇ ತನಿಖಾಧಿಕಾರಿಗಳನ್ನು ‘ನೋಡ್ಕೋತೀನಿ’ ಎಂದು ಹೆದರಿಸುತ್ತಿರುವ ಸುದ್ದಿ ಹೊರಬಿದ್ದಿದೆ.

ಕಾಂಗ್ರೆಸ್ ಸರ್ಕಾರ ರಚನೆಯಾದ ಕೆಲವೇ ತಿಂಗಳುಗಳ ಅಂತರದಲ್ಲಿ, ಅಕ್ಟೋಬರ್ 2023ರಲ್ಲಿ, ಆದಾಯ ತೆರಿಗೆ ಅಧಿಕಾರಿಗಳು ಗುತ್ತಿಗೆದಾರರ ಮನೆಗಳ ಮೇಲೆ ದಾಳಿ ಮಾಡಿ 42 ಕೋಟಿ ವಶಪಡಿಸಿಕೊಂಡರು. ಇದಾದ ಕೆಲವೇ ದಿನಗಳಲ್ಲಿ ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ, ಆತ್ಮಹತ್ಯೆಗೆ ಶರಣಾದರು. ಈ ಹಣ ಯಾರದ್ದು, ಇವರ ಆತ್ಮಹತ್ಯೆಗೆ ಕಾರಣವೇನು ಎಂಬ ಸತ್ಯ ಹೊರಬರಲೇ ಇಲ್ಲ. ಸರ್ಕಾರವೂ ಸಮಜಾಯಿಷಿ ನೀಡಲಿಲ್ಲ. ವಿರೋಧ ಪಕ್ಷಗಳೂ ಕೇಳಲಿಲ್ಲ.

ಒಂದಂತೂ ಸ್ಪಷ್ಟ, ಗುತ್ತಿಗೆದಾರ ಅಂಬಿಕಾಪತಿ ಆತ್ಮಹತ್ಯೆಯಿಂದ ಹಿಡಿದು ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಯ ವರೆಗಿನ ಈ ಎಲ್ಲ ಪ್ರಕರಣಗಳಲ್ಲಿ ಅಪಾರ ಹಣದ ಹರಿವಿದೆ, ಅವ್ಯವಹಾರವಿದೆ, ಅಧಿಕಾರ ದುರ್ಬಳಕೆಯಿದೆ. ಈ ಪ್ರಕರಣಗಳಲ್ಲಿ ಗುತ್ತಿಗೆದಾರರು, ಅಧಿಕಾರಿಗಳು ಮತ್ತು ರಾಜಕೀಯ ನಾಯಕರೆಂಬ ಪ್ರಭಾವಿಗಳ ಅನೈತಿಕ ಸಂಬಂಧವಿದೆ. ಇದನ್ನು ತನಿಖೆ ಮಾಡುತ್ತಿರುವ ಎಸ್ಐಟಿ ಅಧಿಕಾರಿಗಳು, ಅಧಿಕಾರಸ್ಥರ ಮರ್ಜಿ-ಮುಲಾಜುಗಳ ಅಡಿಯಲ್ಲಿಯೇ ಕೆಲಸ ಮಾಡಬೇಕಿರುವುದರಿಂದ, ಅದೇ ಕಷ್ಟದ ಕೆಲಸವಾಗಿದೆ.

ಯಾವುದೇ ಪ್ರಕರಣವಾಗಲಿ, ಅದು ಹೊರಬಂದ ಹೊಸದರಲ್ಲಿ ಭಾರೀ ಸುದ್ದಿಯಾಗುತ್ತದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಯುದ್ಧವೇ ನಡೆದುಹೋಗುತ್ತದೆ. ಅದಕ್ಕೆ ತಕ್ಕಂತೆ ಸುದ್ದಿ ಮಾಧ್ಯಮಗಳು ಕಾವು ಕೊಟ್ಟು ಬೆಂಕಿ ಹಚ್ಚಿ ಜ್ವಲಂತ ಸಮಸ್ಯೆ ಎಂಬಂತೆ ಬಿಂಬಿಸುತ್ತವೆ. ಆದರೆ, ದಿನಗಳೆದಂತೆ ತಣ್ಣಗಾಗುತ್ತದೆ, ನೇಪಥ್ಯಕ್ಕೆ ಸರಿಯುತ್ತದೆ. ಮನುಷ್ಯರ ಮರೆವಿನ ಗುಣ, ಅಧಿಕಾರಸ್ಥರಿಗೆ ಅನುಕೂಲಕರ ವಾತಾವರಣ ನಿರ್ಮಿಸಿಕೊಡುತ್ತದೆ.

ಅಂದರೆ, ಈ ಆತ್ಮಹತ್ಯೆಗಳು, ಅವ್ಯವಹಾರಗಳು, ಬಂಧನಗಳು, ತನಿಖೆಗಳು, ವಿಚಾರಣೆಗಳು, ಮಾಧ್ಯಮಗಳ ಸುದ್ದಿಗಳು ಎಲ್ಲವೂ ಕಣ್ಣೊರೆಸುವ ತಂತ್ರಗಳೇ? ಪ್ರಭಾವಿಗಳಿಗೆ ಶಿಕ್ಷೆಯಾದ ಉದಾಹರಣೆಗಳಿವೆಯೇ? ಕಾಯ್ದೆ-ಕಾನೂನುಗಳೆಲ್ಲ ಬಡವರಿಗೆ ಮಾತ್ರ ಅನ್ವಯಿಸುತ್ತವೆಯೇ? ಎಂಬ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ವರ್ಷದಿಂದ ನಡೆಯುತ್ತಲೇ ಇರುವ ಅಂಬಾನಿ ಮದುವೆಯೂ, ಪೌಷ್ಟಿಕ ಆಹಾರ ಸಿಗದ 67 ಲಕ್ಷ ಶಿಶುಗಳೂ…

ಆಹಾರ ಕ್ಷೇತ್ರ ಕಾರ್ಪೊರೇಟ್‌ ಕುಳಗಳ ಕೈವಶವಾದ ನಂತರ ನಿರಂತರವಾಗಿ ಅಗತ್ಯ ವಸ್ತುಗಳ...

ಈ ದಿನ ಸಂಪಾದಕೀಯ | ಮತ್ತೆ ಮಳೆ ಹೊಯ್ಯುತಿದೆ, ಡೆಂಘೀ ಹರಡುತಿದೆ- ಆರೋಗ್ಯ ಇಲಾಖೆ ಏನು ಮಾಡುತ್ತಿದೆ?

ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದ್ದಂತೆಯೇ ಡೆಂಘೀ ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಅಧಿಕಾರಿಗಳು,...

ಈ ದಿನ ಸಂಪಾದಕೀಯ | ಗಾಯ ನೆಕ್ಕಿಕೊಳ್ಳುತ್ತಿರುವ ಮೋದಿ ಎಚ್ಚರಿಕೆ- ಹೊಸ ದಮನ ದಾಳಿ ದಸ್ತಗಿರಿಗಳ ಮುನ್ಸೂಚನೆ

ಮೋದಿಯವರು ಚುನಾವಣಾ ಭಾಷಣಗಳಲ್ಲಿ ಕಾರಿದ್ದ ಮುಸ್ಲಿಮ್ ದ್ವೇಷವನ್ನೂ ಅವರಿಗೆ ತಿರುಗುಬಾಣವಾಗಿ ಹೂಡಲಾಗಿದೆ....

ಈ ದಿನ ಸಂಪಾದಕೀಯ | ಮೊದಲ ಭಾಷಣದಲ್ಲೇ ಬಿಜೆಪಿಗರ ಬೆವರಿಳಿಸಿದ ರಾಹುಲ್ ಮತ್ತು ಮಹುವಾ

ಆಡಳಿತ ಪಕ್ಷ ದಾರಿ ತಪ್ಪಿ ನಡೆದಾಗ ಎಚ್ಚರಿಸುವ, ಜನಕಲ್ಯಾಣದ ವಿಷಯದಲ್ಲಿ ಜಾಣನಿದ್ರೆಗೆ...