ತೆಲಂಗಾಣ ಮಾಜಿ ಸಿಎಂ ಕೆ ಚಂದ್ರಶೇಖರ್ ರಾವ್ ವಿರುದ್ಧ ಕಾಲೇಶ್ವರಂ ಯೋಜನೆಯ ಮೇಡಿಗಡ್ಡ ಬ್ಯಾರೇಜ್‌ನ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪ ಮಾಡಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದ ವ್ಯಕ್ತಿಯೊಬ್ಬರು ಹೈದರಾಬಾದ್‌ನ ಜಯಶಂಕರ್ ಭೂಪಲ್‌ಪಲ್ಲಿ ನಗರದಲ್ಲಿ ಕೊಲೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
50 ವರ್ಷದ ಎನ್ ರಾಜಲಿಂಗಮೂರ್ತಿ ಅವರನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಭೂವ್ಯಾಜ್ಯದ ಸಂಬಂಧ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಆದಾಗ್ಯೂ ಈ ಘಟನೆಯ ಬಗ್ಗೆ ರಾಜಕೀಯ ವೈಷಮ್ಯವಿರುವುದನ್ನು ಪೊಲೀಸರು ತಳ್ಳಿಹಾಕಿದ್ದಾರೆ.
ಬುಧವಾರ ಸಂಜೆ 7.30ರ ವೇಳೆಯಲ್ಲಿ ಹೋಗುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಗಾಯಗೊಂಡ ಇವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಡಿಗಡ್ಡ ಬ್ಯಾರೇಜ್‌ನ ನಿರ್ಮಾಣದಲ್ಲಿ ಅಕ್ರಮ ನಡೆದಿದೆ ಎಂಬ ಹಿನ್ನೆಲೆಯಲ್ಲಿ ರಾಜಲಿಂಗಮೂರ್ತಿ ಅವರು 2023ರ ಅಕ್ಟೋಬರ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಕೆಸಿಆರ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಸುವಂತೆ ಕೋರ್ಟ್ ಆದೇಶಿಸಿತ್ತು.
ಜಿಲ್ಲಾ ಸೆಷನ್ಸ್ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸದ ಹಿನ್ನೆಲೆಯಲ್ಲಿ ಕೆಸಿಆರ್ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಇತರರು ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು.