ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಕುಕಿ-ಜೋ ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘರ್ಷಣೆಯಲ್ಲಿ 10 ಮಂದಿ ಕುಕಿ ಬಂಡುಕೋರರನ್ನು ಸಿಆರ್‌ಪಿಎಫ್ ಹತ್ಯೆಗೈದಿದೆ. ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಜಿಲ್ಲೆಯ ಬೊರೊಬೆಕ್ರಾ ಪೊಲೀಸ್ ಠಾಣೆ ಮತ್ತು ಪಕ್ಕದ ಸಿಆರ್‌ಪಿಎಫ್ ಶಿಬಿರದ ಮೇಲೆ ಬಂದೂಕುಧಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ. ಅಲ್ಲದೆ, ಜಕುರಾಧೋರ್ ಕರೋಂಗ್ ಮಾರುಕಟ್ಟೆಯಲ್ಲಿದ್ದ ಹಲವಾರು ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಮನೆಗಳ ಮೇಲೂ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಬಂದೂಕುಧಾರಿಗಳ ಮೇಲೆ ಸಿಆರ್‌ಪಿಎಫ್ ಪ್ರತಿದಾಳಿ ನಡೆಸಿದೆ. ಬೊರೊಬೆಕ್ರಾ ಪ್ರದೇಶದಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ 10 ಮಂದಿ ಬಂಡುಕೋರರು ಸಾವನ್ನಪ್ಪಿದ್ದಾರೆ.
“ಬೊರೊಬೆಕ್ರಾ ಪ್ರದೇಶದಲ್ಲಿ ಬಂಡುಕೋರರು ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಪ್ರಬಲ ಪ್ರತಿದಾಳಿ ನಡೆಸಿವೆ. ಘಟನೆಯಲ್ಲಿ ಒಬ್ದರು ಸಿಆರ್‌ಪಿಎಫ್ ಕಾನ್‌ಸ್ಟೇಬಲ್ ಸಂಜೀವ್ ಕುಮಾರ್ ಎಂಬವರಿಗೆ ಬುಲೆಟ್ ತಗುಲಿ ಗಾಯವಾಗಿದೆ. ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜಿಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.
“ಸುಮಾರು 40-45 ನಿಮಿಷಗಳ ಭಾರೀ ಗುಂಡಿನ ಚಕಮಕಿ ನಡೆದಿದೆ. ಬಳಿಕ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಸ್ಥಳದಲ್ಲಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಶಸ್ತ್ರಸಜ್ಜಿತ ಬಂಡುಕೋರರ 10 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದೆ.
ಬೊರೊಬೆಕ್ರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗಾಗಿ ಪರಿಹಾರ ಶಿಬಿರವಿದ್ದು, ಅಲ್ಲಿ ವಾಸಿಸುತ್ತಿದ್ದ ಐವರು ನಾಪತ್ತೆಯಾಗಿದ್ದಾರೆ. ಈ ನಾಗರಿಕರನ್ನು ಬಂಡುಕೋರರು ಅಪಹರಿಸಿದ್ದಾರೆಯೇ? ಅಥವಾ ದಾಳಿ ನಡೆದಾಗ ಅವರೇ ಸ್ಥಳಾಂತರವಾಗಿದ್ದಾರೆಯೇ? ಎಂಬುವುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಿಗಾಗಿ ಶೋಧ ನಡೆಯುತ್ತಿದೆ ಎಂದಿದ್ದಾರೆ.
ಕುಕಿ-ಜೋ ಕೌನ್ಸಿಲ್ ತನ್ನ 11 ಸ್ವಯಂ ಸೇವಕರ ಹತ್ಯೆಯನ್ನು ಖಂಡಿಸಿದೆ. ಅವರಿಗೆ ಗೌರವ ಸೂಚಿಸುವ ಸಲುವಾಗಿ ಇಂದು ಬೆಳಿಗ್ಗೆ 5 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್‌ಗೆ ಕರೆ ಕೊಟ್ಟಿದೆ.