ಸೋಮವಾರ ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 11 ಕುಕಿ ಬಂಡುಕೋರರ ಹತ್ಯೆ ಮಾಡಲಾಗಿದೆ. ಈ ಸಂದರ್ಭದಲ್ಲೇ ಓರ್ವ ಸಿಆರ್‌ಪಿಎಫ್ ಯೋಧ ಹುತಾತ್ಮರಾಗಿರುವುದಾಗಿ ವರದಿಯಾಗಿದೆ.
ಬೊರೊಬೆಕ್ರಾ ಉಪವಿಭಾಗದ ಜಕುರಾಡೋರ್ ಕರೋಂಗ್‌ನಲ್ಲಿ ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಗೆ ಗಾಯಗಳಾಗಿವೆ. ಈ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಬೊರೊಬೆಕ್ರಾ ಪೊಲೀಸ್ ಠಾಣೆ ಮತ್ತು ಸಿಆರ್‌ಪಿಎಫ್ ಶಿಬಿರದ ಮೇಲೆ ಮಧ್ಯಾಹ್ನ 2.30 ರ ಸುಮಾರಿಗೆ ಬಂಡುಕೋರರು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಬಂಡುಕೋರರು 100 ಮೀಟರ್ ದೂರದಲ್ಲಿರುವ ಜಕುರಾದೋರ್ ಕರೋಂಗ್ ಮಾರುಕಟ್ಟೆಗೆ ನುಗ್ಗಿ ಹಲವಾರು ಅಂಗಡಿಗಳನ್ನು ಸುಟ್ಟುಹಾಕಿದರು. ಕೆಲವು ಮನೆಗಳ ಮೇಲೆ ದಾಳಿ ಮಾಡಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಇಬ್ಬರು ಮಹಿಳೆಯರ ಹತ್ಯೆ
ಭದ್ರತಾ ಪಡೆಗಳು ಪ್ರತಿದಾಳಿ ನಡೆಸುತ್ತಿದ್ದಂತೆ, ಭಾರೀ ಗುಂಡಿನ ಚಕಮಕಿ ಪ್ರಾರಂಭವಾಯಿತು. ಈ ಗುಂಡಿನ ಚಕಮಕಿಯಲ್ಲಿ 11 ಮಂದಿ ಬಂಡುಕೋರರ ಹತ್ಯೆ ಮಾಡಲಾಗಿದೆ. ಒಂದು ಗಂಟೆಗೂ ಅಧಿಕ ಕಾಲ ಗುಂಡಿನ ಚಕಮಕಿ ನಡೆದಿದೆ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪರಿಹಾರ ಶಿಬಿರವಿದ್ದು, ಅಲ್ಲಿ ವಾಸಿಸುತ್ತಿದ್ದ ಐವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಐವರನ್ನು ಬಂಡುಕೋರರು ಅಪಹರಿಸಿದ್ದಾರೆಯೇ ಅಥವಾ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಐವರು ತಲೆಮರೆಸಿಕೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಇತ್ತೀಚೆಗೆ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಓರ್ವ ಮಹಿಳೆಗೆ ಗುಂಡು ಹಾರಿಸಿ, ಅತ್ಯಾಚಾರ ಎಸಗಿ ಸುಟ್ಟು ಕೊಲ್ಲಲಾಗಿದೆ. ಇನ್ನೋರ್ವ ಮಹಿಳೆಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
