ಮಣಿಪುರದಲ್ಲಿ ಹಚ್ಚಲಾಗಿರುವ ಜನಾಂಗೀಯ ದ್ವೇಷದ ಬೆಂಕಿ ಧಗಧಗಿಸುತ್ತಲೇ ಇದೆ. ಶುಕ್ರವಾರ ಸಂಜೆ ಜೀರಿ ನದಿಯಲ್ಲಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳ ಶವಗಳು ತೇಲಿವೆ.
ಜೀರಿಬಮ್‌ನಲ್ಲಿ ಕಳೆದ ಸೋಮವಾರದಿಂದ ನಾಪತ್ತೆಯಾಗಿರುವ ಒಂದೇ ಕುಟುಂಬದ ಆರು ಮಂದಿ ಮೈಥೇಯಿಗಳ ಪೈಕಿ ಮೂವರ ಶವಗಳಿವು ಎಂದು ನಂಬಲಾಗಿದೆ. ಜೀರಿಬಮ್‌ನ ಬೋರೋಬೆಕ್ರ ಸೀಮೆಯಲ್ಲಿ ಹಿಂಸಾಚಾರದ ನಂತರ ಮೂವರು ಮಹಿಳೆಯರು ಮತ್ತು ಶಿಶುವೊಂದು ಸೇರಿದಂತೆ ಮೂವರು ಮಕ್ಕಳು ನಾಪತ್ತೆಯಾಗಿದ್ದರು. ಕಳೆದ ಜೂನ್ ತಿಂಗಳಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಬೋರೋಬೆಕ್ರ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗಿದ್ದ ಪರಿಹಾರ ಶಿಬಿರದಲ್ಲಿ ಈ ಕುಟುಂಬ ಆಶ್ರಯ ಪಡೆದಿತ್ತು.
ಜೀರಿ ನದಿಯಲ್ಲಿ ತೇಲುತ್ತಿದ್ದ ಈ ಶವಗಳನ್ನು ಅಸ್ಸಾಮ್ ರೈಫಲ್ಸ್ ಸಿಬ್ಬಂದಿ ಹೊರಗೆಳೆದಿದೆ. ಕಳೇಬರಗಳನ್ನು ಕುಟುಂಬ ಇನ್ನೂ ಗುರುತಿಸಬೇಕಿದೆ. ಜೀರಿ ನದಿಯು ಬರಾಕ್ ನದಿಯನ್ನು ಕೂಡುವ ಸಂಗಮ ಸ್ಥಳ ಜೀರಿಮುಖದಲ್ಲಿ ಈ ಶವಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದವರ ಪೈಕಿ ವೃದ್ಧೆ, ಆಕೆಯ ಇಬ್ಬರು ಹೆಣ್ಣುಮಕ್ಕಳು ಹಾಗೂ ಮೂವರು ಮೊಮ್ಮಕ್ಕಳು ಸೇರಿದ್ದಾರೆ. ಸೋಮವಾರ ಬೆಳಗಿನ ಜಾವ ದಾಳಿ ನಡೆಸಿದ ಉಗ್ರಗಾಮಿಗಳು ಎನ್ನಲಾದ ಶಸ್ತ್ರಧಾರಿ ಹ್ಮಾರ್ ಗಂಡಸರ ಗುಂಪೊಂದು ಇವರನ್ನು ಅಪಹರಿಸಿರುವುದಾಗಿ ಮೈತೇಯಿ ಗುಂಪುಗಳು ಆಪಾದಿಸಿವೆ.
ನಿರಾಶ್ರಿತರ ಶಿಬಿರದ ಮೇಲೆ ದಾಳಿ-ಹಿಂಸಾಚಾರದ ನಂತರ ಭದ್ರತಾ ಪಡೆಗಳು 10 ಮಂದಿ ಶಸ್ತ್ರಧಾರಿಗಳನ್ನು ಕೊಂದಿದ್ದವು. ನಿರಾಶ್ರಿತ ಶಿಬಿರ ವಾಸಿಗಳಾಗಿದ್ದ ಇಬ್ಬರು ವಯಸ್ಕ ಮೈತೇಯಿ ಪುರುಷರ ಶವಗಳೂ ಈ ವಾರದ ಆರಂಭದಲ್ಲಿ ಪತ್ತೆಯಾಗಿದ್ದವು. ನಾಪತ್ತೆಯಾದ ಮೈತೇಯಿಗಳ ಶೋಧಕಾರ್ಯಾಚರಣೆ ಜರುಗಿತ್ತು. ಆಪಾದಿತ ಅಪಹರಣದ ಬಗ್ಗೆ ಜೀರಿಬಮ್ ಮತ್ತು ರಾಜ್ಯದ ಮೈತೇಯಿ ಬಹುಳ ಕಣಿವೆಯಲ್ಲಿ ಆಕ್ರೋಶವನ್ನು ಬಡಿದೆಬ್ಬಿಸಿತ್ತು. ಮೈತೇಯಿ ಗುಂಪುಗಳು ಅಪಹೃತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದವು.