ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಣಿಪುರ ಯುವತಿಯರ ಸಾವು; ಶವ ಸಾಗಿಸುವುದೇ ಸವಾಲು: ಕಾರಣ?

Date:

Advertisements
ಮೈತೇಯಿ ಯುವತಿ ನ್ಗಾಂಥೋಯ್ ಅವರ ಮೃತದೇಹವನ್ನು ಸ್ಥಳಾಂತರಿಸುವುದು ಕಷ್ಟವೇನಲ್ಲ. ಯಾಕೆಂದರೆ ಆಕೆಯ ಕುಟುಂಬಸ್ಥರು ಮೈತೇಯಿ ಪ್ರಾಬಲ್ಯದ ತೌಬಲ್ ಜಿಲ್ಲೆಯಲ್ಲೇ ಇದ್ದಾರೆ. ಈಗ ಕಷ್ಟವೆನಿಸುತ್ತಿರುವುದು ಸಿಂಗ್ಸನ್ ಅವರ ಶವ ವರ್ಗಾವಣೆ!

ಜನಾಂಗೀಯ ಸಂಘರ್ಷದಿಂದಾಗಿ ಇಬ್ಭಾಗವಾಗಿರುವ ಮಣಿಪುರದಲ್ಲಿ ಮತ್ತೊಂದು ಮನಕಲಕುವ ಸನ್ನಿವೇಶ ಸೃಷ್ಟಿಯಾಗಿದೆ. ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ 171 ವಿಮಾನ ದುರಂತದಲ್ಲಿ ಸಾವಿಗೀಡಾದವರ ಪೈಕಿ ಮಣಿಪುರದ ಇಬ್ಬರು ಯುವತಿಯರಿದ್ದರು ಮತ್ತು ಅವರು ಏರ್ ಇಂಡಿಯಾ ಕ್ಯಾಬಿನ್‌ನಲ್ಲಿ ಸಿಬ್ಬಂದಿಯಾಗಿದ್ದರು. ಇವರ ಮೃತದೇಹಗಳೀಗ ಸಂದಿಗ್ಧತೆ ಸೃಷ್ಟಿಗೆ ಕಾರಣವಾಗಿದೆ.

2023ರ ಮೇನಲ್ಲಿ ಶುರುವಾದ ಜನಾಂಗೀಯ ಸಂಘರ್ಷದಿಂದಾಗಿ ಕಣಿವೆ ಮತ್ತು ಗುಡ್ಡಗಾಡು ಪ್ರದೇಶಗಳಾಗಿ ಮಣಿಪುರದ ಜನರು ಇಬ್ಭಾಗವಾಗಿದ್ದಾರೆ. ಹೀಗಾಗಿ ಕುಕಿಗಳಿರುವ ಪ್ರದೇಶಗಳಲ್ಲಿ ಮೈತೇಯಿಗಳಿಲ್ಲ, ಮೈತೇಯಿಗಳಿರುವ ಪ್ರದೇಶಗಳಲ್ಲಿ ಕುಕಿಗಳಿಲ್ಲ. ಪೂರ್ವ ಇಂಫಾಲ, ಪಶ್ಚಿಮ ಇಂಫಾಲ, ತೌಬಲ್, ಕಕ್ಚಿಂಗ್‌, ಬಿಷ್ಣುಪುರ್ ಮತ್ತು ಜಿರಿಬಾಮ್ ಜಿಲ್ಲೆಗಳಲ್ಲಿ ಮೈತೇಯಿಗಳು ನೆಲೆಸಿದ್ದಾರೆ. ಗುಡ್ಡಗಾಡು ಜಿಲ್ಲೆಗಳಾದ ಚೂರಾಚಾಂದ್ಪುರ, ಕಾಂಗ್‌ಪೋಕ್ಪಿ, ಚಾಂದೇಲ್‌ ಮತ್ತು ತೆಂಗ್‌ನೌಪಾಲ್ ಜಿಲ್ಲೆಗಳಲ್ಲಿ ಹೆಚ್ಚಿನ ಕುಕಿಗಳಿದ್ದಾರೆ. ಈಗ ದುರಂತದಲ್ಲಿ ಸಾವಿಗೀಡಾಗಿರುವ ಇಬ್ಬರು ಯುವತಿಯರ ಪೈಕಿ ಒಬ್ಬರು ಕುಕಿ, ಮತ್ತೊಬ್ಬರು ಮೈತೇಯಿ. ಈಗ ಕುಕಿ ಯುವತಿಯ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವುದು ಹೇಗೆಂಬುದೇ ಯಕ್ಷಪ್ರಶ್ನೆ.

ಮೃತ ಕ್ಯಾಬಿನ್ ಸಿಬ್ಬಂದಿಗಳಲ್ಲಿ ಒಬ್ಬರಾದ ನ್ಗಾಂಥೋಯ್ ಕೆ ಶರ್ಮಾ ಮೈತೇಯಿ ಸಮುದಾಯದವರು. ಇನ್ನೊಬ್ಬರು ಲ್ಯಾಮ್ನುಂಥಿಯೆಮ್ ಸಿಂಗ್ಸನ್ ಕುಕಿ-ಝೋ ಸಮುದಾಯಕ್ಕೆ ಸೇರಿದವರು. ಇಬ್ಬರೂ ಅನ್ಯೋನ್ಯವಾಗಿ ಕೆಲಸ ಮಾಡುತ್ತಿದ್ದರು. ಈಗ ಅಪಘಾತದಲ್ಲಿ ಅಸುನೀಗಿದ್ದಾರೆ. ಅಹಮದಾಬಾದ್‌ನಲ್ಲಿ ಅಧಿಕಾರಿಗಳು ಈ ಇಬ್ಬರು ಯುವತಿಯರ ಶವಗಳನ್ನು ಗುರುತಿಸಿ ಹಿಂದಿರುಗಿಸಲು ಕೆಲಸ ಮಾಡುತ್ತಿದ್ದಾರೆ. ಇತ್ತ ಮಣಿಪುರದಲ್ಲಿ ಅಧಿಕಾರಿಗಳು, ಪೊಲೀಸರು ಶವ ಸ್ಥಳಾಂತರದ ಬಗ್ಗೆ ತೀವ್ರ ಚರ್ಚೆಯಲ್ಲಿದ್ದಾರೆ. ಕುಕಿ ಮತ್ತು ಮೈತೇಯಿ ನಾಯಕರ ನಡುವೆ ತೀವ್ರ ಮಾತುಕತೆ ನಡೆಯುತ್ತಿದೆ.

Advertisements

ಎರಡು ವರ್ಷಗಳ ಹಿಂದೆ ಶುರುವಾದ ಮಣಿಪುರ ಸಂಘರ್ಷದಲ್ಲಿ ಈವರೆಗೆ 260ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. 60,000ಕ್ಕೂ ಹೆಚ್ಚು ಜನರು ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಇಷ್ಟೆಲ್ಲ ಅನಾಹುತಗಳಿಗೆ ಕಾರಣವಾದ ಬಿರೇನ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ, ರಾಷ್ಟ್ರಪತಿ ಆಡಳಿತ ಹೇರಲಾಯಿತು. ಸಂಘರ್ಷದ ಸಂದರ್ಭದಲ್ಲಿ ನಾಗರಿಕರು ಲೂಟಿ ಮಾಡಿರುವ ಮದ್ದುಗುಂಡುಗಳನ್ನು ವಾಪಸ್ ಪಡೆಯುವ ಕೆಲಸವನ್ನು ರಾಜ್ಯಪಾಲ ಅಜಯ್ ಕುಮಾರ್ ಬಲ್ಲಾ ಮಾಡಿದರೂ, ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎಂದೇ ಹೇಳಲಾಗುತ್ತಿದೆ. ಮಣಿಪುರ ಸದಾ ಬೂದಿಮುಚ್ಚಿದ ಕೆಂಡವಾಗಿರುವಾಗ ಏರ್‌ ಇಂಡಿಯಾ ವಿಮಾನ ದುರಂತವೂ ಮತ್ತೊಂದು ಸಂಕಷ್ಟವನ್ನು ಸೃಷ್ಟಿಸಿತು. ಕೇಂದ್ರ ಭದ್ರತಾ ಪಡೆಗಳು ಕೇವಲ ಬಫರ್ ಝೋನ್‌ಗಳಲ್ಲಿ ಸಕ್ರಿಯವಾಗಿದ್ದರೂ, ಗಡಿ ಗ್ರಾಮಗಳಲ್ಲಿ ಸಮುದಾಯಗಳ ಮಿಲಿಟರಿ ಪಡೆಗಳೇ ಕಾವಲು ಕಾಯುತ್ತಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿರಿ: ಮಣಿಪುರದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿರುವ ‘ಆರಂಬೈ ತೆಂಗೋಲ್’ ಹುಟ್ಟಿದ್ದು ಹೇಗೆ?

ಮೈತೇಯಿ ಯುವತಿ ನ್ಗಾಂಥೋಯ್ ಅವರ ಮೃತದೇಹವನ್ನು ಸ್ಥಳಾಂತರಿಸುವುದು ಕಷ್ಟವೇನಲ್ಲ. ಯಾಕೆಂದರೆ ಆಕೆಯ ಕುಟುಂಬಸ್ಥರು ಮೈತೇಯಿ ಪ್ರಾಬಲ್ಯದ ತೌಬಲ್ ಜಿಲ್ಲೆಯಲ್ಲೇ ಇದ್ದಾರೆ. ಈಗ ಕಷ್ಟವೆನಿಸುತ್ತಿರುವುದು ಸಿಂಗ್ಸನ್ ಅವರ ಶವ ವರ್ಗಾವಣೆ!

ಮೃತ ಕುಕಿ ಯುವತಿ  ಸಿಂಗ್ಸನ್ ಅವರಿಗೆ ತಂದೆ ಇಲ್ಲ. ತನ್ನ ತಾಯಿ ಹಾಗೂ ಒಡಹುಟ್ಟಿದವರೊಂದಿಗೆ ಇಂಫಾಲ್‌ನ ನ್ಯೂ ಲಂಬುಲೇನ್ ಪ್ರದೇಶದಲ್ಲಿ ಅವರು ವಾಸಿಸುತ್ತಿದ್ದರು. ಆದರೆ ಸಂಘರ್ಷ ಭುಗಿಲೆದ್ದ ನಂತರ ಗುಡ್ಡಗಾಡು ಜಿಲ್ಲೆ ಕಾಂಗ್‌ಪೋಕ್ಪಿಗೆ ಸ್ಥಳಾಂತರವಾಗಬೇಕಾಯಿತು. ಹಿಂಸಾಚಾರದ ವೇಳೆ ಅವರ ಮನೆ ಲೂಟಿಯಾಯಿತು. “ಸಿಂಗ್ಸನ್ ಅವರ ತಾಯಿ ಈಗ ಕಾಂಗ್‌ಪೋಕ್ಪಿಯಲ್ಲಿ ನಮ್ಮೊಂದಿಗೆ ಇದ್ದಾರೆ. ಅಹಮದಾಬಾದ್‌ನ ಅಧಿಕಾರಿಗಳಿಂದ ದೃಢೀಕರಣಕ್ಕಾಗಿ ನಾವು ಕಾಯುತ್ತಿದ್ದೇವೆ. ಖಚಿತ ಸುದ್ದಿ ಬಂದ ನಂತರ ನಾವು ಹೇಳಿಕೆ ನೀಡುತ್ತೇವೆ” ಎಂದು ಸಿಂಗ್ಸನ್ ಅವರ ಚಿಕ್ಕಪ್ಪ ಹಹಾವೊ ಹೈಪಿ ಹೇಳಿದ್ದಾರೆ.

ಸಿಂಗ್ಸನ್ ಅವರ ಮೃತದೇಹವನ್ನು ಎಲ್ಲಿ ಇಳಿಸುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಆಕೆಯ ಕುಟುಂಬದೊಂದಿಗೆ ಮಾತನಾಡಿದ್ದಾರೆ. “ಇಂಫಾಲ ವಿಮಾನ ನಿಲ್ದಾಣಕ್ಕೆ ಬಂದು ಶವ ಸ್ವೀಕರಿಸಲು ಬಯಸಿದರೆ ಎಲ್ಲ ಭದ್ರತೆ ಒದಗಿಸಲಾಗುವುದು. ಅವರು ವಾಸವಿರುವ ಕಾಂಗ್‌ಪೋಕ್ಪಿಗೆ ಭದ್ರತಾ ಬೆಂಗಾವಲು ಪಡೆಯನ್ನು ಕಳುಹಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.

ಮಣಿಪುರ ಸರ್ಕಾರ ಸೋಮವಾರ ರಾತ್ರಿ  ಹೇಳಿಕೆ ಬಿಡುಗಡೆ ಮಾಡಿದ್ದು, “ನಾವು ಏರ್ ಇಂಡಿಯಾ ಮತ್ತು ಟಾಟಾ ಗುಂಪಿನೊಂದಿಗೆ ಸಂಪರ್ಕದಲ್ಲಿದ್ದೇವೆ. ಇಂಫಾಲ್ ವಿಮಾನ ನಿಲ್ದಾಣದಲ್ಲಿ ಎರಡೂ ಶವಗಳನ್ನು ಸ್ವೀಕರಿಸಲು ಸಿದ್ಧವಾಗಿದ್ದೇವೆ” ಎಂದು ತಿಳಿಸಿದೆ.

“ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದ ವಿಚಾರವನ್ನು ಮೃತರ ಕುಟುಂಬಗಳಿಗೆ ಬಿಡಲಾಗಿದೆ. ಅವರ ಇಚ್ಛೆಯಂತೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಲು ನಾವು ಬದ್ಧವಾಗಿದ್ದೇವೆ” ಎಂದೂ ಹೇಳಿದೆ.

ಮಣಿಪುರ ಪೊಲೀಸ್ ಮುಖ್ಯಸ್ಥ ರಾಜೀವ್ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸೋಮವಾರ ಸಂತ್ರಸ್ತ ಕುಕಿ ಕುಟುಂಬದೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಇಂಫಾಲ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಶವ ಸಾಗಿಸಲು ಸಾಕಷ್ಟು ಭದ್ರತೆಯನ್ನು ನೀಡುವುದಾಗಿ ಹೇಳಿದ್ದಾರೆಂದು ವರದಿಗಳಾಗಿವೆ.

“ಕಾಂಗ್‌ಪೋಕ್ಪಿ ಪೊಲೀಸ್ ವರಿಷ್ಠಾಧಿಕಾರಿ ಕುಟುಂಬವನ್ನು ಭೇಟಿಯಾಗಿದ್ದಾರೆ. ಇಂಫಾಲ ಮೂಲಕ ಶವ ತರುವುದಕ್ಕೆ ವಿಶ್ವಾಸವಿದ್ದರೆ ಎಲ್ಲಾ ಸಹಾಯದ ಭರವಸೆ ನೀಡಿದ್ದಾರೆ ಅಥವಾ ಶವವನ್ನು ಸಂಗ್ರಹಿಸಲು ಇಂಫಾಲ್‌ಗೆ ಹೋದರೆ ಅವರ ಸ್ವಂತ ಸಮುದಾಯದಿಂದಲೇ ಟೀಕೆಗೆ ಒಳಗಾಗಬಹುದು ಎಂಬ ಚಿಂತೆಯಲ್ಲಿ ಈ ಕುಕಿ ಕುಟುಂಬವಿದೆ” ಎಂದು ಹೆಸರು ಬಹಿರಂಗಪಡಿಸಲು ಬಯಸದ ಮಣಿಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ. ಆದರೆ ಈ ರೀತಿಯಲ್ಲಿ ಅಮಾನವೀಯತೆ ನಡೆಯುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿರಿ: ಬೈಕ್ ಟ್ಯಾಕ್ಸಿ ನಿಷೇಧ | ಅಸಂಘಟಿತ ಕಾರ್ಮಿಕ ವಲಯ ಅತಂತ್ರ: ಸರ್ಕಾರ ಮಾರ್ಗಸೂಚಿ ಅಳವಡಿಸುವ ಅಗತ್ಯವಿದೆ

ಕುಟುಂಬಕ್ಕೆ ಸಹಾಯ ಮಾಡುತ್ತಿರುವ ಕಾಂಗ್‌ಪೋಕ್ಪಿ ಘಟಕದ ‘ಕುಕಿ ವಿದ್ಯಾರ್ಥಿ ಸಂಘಟನೆ’ಯ ಪ್ರಧಾನ ಕಾರ್ಯದರ್ಶಿ ಕೆ. ಶೋಂಗ್ರೆಂಗ್ ಪ್ರತಿಕ್ರಿಯಿಸಿ, “ಕುಕಿ-ಝೋ ಜನರು ಇಂಫಾಲ್‌ಗೆ ಹೋಗುವುದು ಸುರಕ್ಷಿತವಲ್ಲ. ಕಳೆದ ಎರಡು ವರ್ಷಗಳ ಹಿಂದೆ ಅಲ್ಲಿದ್ದ ನಮ್ಮ ಜನರಿಗೆ ಏನಾಯಿತೆಂಬುದು ನಮಗೆ ತಿಳಿದಿರುವ ಸಂಗತಿಯೇ. ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ವಿದ್ಯಾರ್ಥಿ ಸಂಘಟನೆ ಸಂತ್ರಸ್ತ ಕುಟುಂಬಕ್ಕೆ ಸಹಾಯ ಮಾಡುತ್ತಿದೆ. ಆದರೆ ತಮ್ಮ ಮಗಳ ಶವವನ್ನು ಮನೆಗೆ ಹೇಗೆ ತರುತ್ತಾರೆ ಎಂಬುದು  ಆ ಕುಟುಂಬಕ್ಕೆ ಬಿಟ್ಟ ವಿಚಾರ” ಎಂದು ಸ್ಪಷ್ಟಪಡಿಸಿದ್ದಾರೆ.

ಸಿಂಗ್ಸನ್ ಅವರ ಶವವನ್ನು ನೆರೆಯ ರಾಜ್ಯ ನಾಗಾಲ್ಯಾಂಡ್‌ನ ದಿಮಾಪುರ ವಿಮಾನ ನಿಲ್ದಾಣಕ್ಕೆ ತಂದು, ಅಲ್ಲಿಂದ ರಸ್ತೆ ಮೂಲಕ ಕಾಂಗ್‌ಪೋಕ್ಪಿಗೆ ತರಬಹುದು. ಏಕೆಂದರೆ ಮಾರ್ಗಮಧ್ಯದಲ್ಲಿ ಯಾವುದೇ ಮೈತೇಯಿ ಪ್ರದೇಶಗಳಿಲ್ಲ. ಅಥವಾ ಪಕ್ಕದ ರಾಜ್ಯ ಮಿಝೋರಾಂನ ಐಜ್ವಾಲ್‌ನಲ್ಲಿರುವ ವಿಮಾನ ನಿಲ್ದಾಣಕ್ಕೆ ಶವವನ್ನು ತಂದು, ಕುಕಿಗಳ ರಾಜಧಾನಿ ಎಂದೇ ಹೇಳಲಾಗುವ ಚೂರಾಚಾಂದ್ಪುರಕ್ಕೆ ರಸ್ತೆ ಮಾರ್ಗವಾಗಿ ಸಾಗಿಸಬಹುದು. ಆದರೆ ಚೂರಾಚಾಂದ್ಪುರ ಕುಕಿಗಳ ಪ್ರದೇಶವಾದರೂ ಅಲ್ಲಿಂದ ಕಾಂಗ್‌ಪೋಕ್ಪಿಗೆ ಹೋಗಬೇಕಾದರೆ ಇಂಫಾಲವನ್ನು ಹಾದು ಹೋಗಬೇಕಾಗುತ್ತದೆ. ಈ ಮಾರ್ಗವೂ ಸಮಸ್ಯಾತ್ಮಕ.

ಇದೆಲ್ಲದರ ನಡುವೆ ಇರುವ ಮತ್ತೊಂದು ಮಾರ್ಗವೇ ಮಾನವೀಯತೆ. ಇಂಫಾಲ್‌ನ ಅತ್ಯಂತ ಪ್ರಭಾವಶಾಲಿ ಮೈತೇಯಿ ಗುಂಪುಗಳಲ್ಲಿ ಒಂದಾದ COCOMI ಸೋಮವಾರ ಪ್ರತಿಕ್ರಿಯಿಸಿ, “ಸಮಾಜದ ಎಲ್ಲಾ ವರ್ಗಗಳು ಒಗ್ಗಟ್ಟಾಗಿರಬೇಕು. ಮಣಿಪುರದಲ್ಲಿ ಯಾವುದೇ ಮೃತದೇಹಗಳ ಗೌರವಯುತ ಹಸ್ತಾಂತರವನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಒತ್ತಾಯಿಸಿದೆ.

COCOMIನ ಸಂಚಾಲಕ ಖುರೈಜಮ್ ಅಥೌಬಾ, “ಸಮಾಜದ ಎಲ್ಲಾ ವರ್ಗಗಳು, ಸ್ಥಳೀಯ ಕ್ಲಬ್‌ಗಳು, ಗುಂಪುಗಳು, ಸಂಸ್ಥೆಗಳು ಮೃತದೇಹದ ಹಸ್ತಾಂತರಕ್ಕೆ ಸಂಪೂರ್ಣ ಸಹಕಾರವನ್ನು ನೀಡಬೇಕೆಂದು ನಾವು ಮನವಿ ಮಾಡಿದ್ದೇವೆ. ಅವರ ಅಕಾಲಿಕ ನಷ್ಟಕ್ಕೆ ಇಡೀ ಮಣಿಪುರ ರಾಜ್ಯವು ದುಃಖಿಸುತ್ತದೆ. ಮೃತದೇಹಗಳ ಸುಗಮ ವರ್ಗಾವಣೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ. ಅಭ್ಯಂತರವಿಲ್ಲವಾದರೆ ಕುಕಿ ಕುಟುಂಬದವರು ತಮ್ಮ ಹೆಣ್ಣುಮಕ್ಕಳ ಮೃತದೇಹವನ್ನು ಇಂಫಾಲ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಬಹುದು. ಇದಕ್ಕೆ ಯಾವುದೇ ಹಿಂಜರಿಕೆ ಬೇಡ. ಅವರು ಮರಳಿ ಬರುವುದನ್ನು ಗೌರವಿಸೋಣ ಮತ್ತು ಅವರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ” ಎಂದಿದ್ದಾರೆ.

ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳು ಮೈತೇಯಿ ಗುಂಪುಗಳೊಂದಿಗೆ ಮಾತನಾಡಿದ್ದಾರೆ. ಸಿಂಗ್ಸನ್ ಅವರ ದೇಹವನ್ನು ಇಂಫಾಲದಿಂದ ಕಾಂಗ್‌ಪೋಕ್ಪಿಗೆ ಸಾಗಿಸಲು ಅವಕಾಶ ನೀಡುವುದು ‘ಶಾಂತಿಯ ಸಂದೇಶ’ ಎಂದೇ ಬಣ್ಣಿಸಲಾಗುತ್ತಿದೆ. ಅನೇಕ ಗುಂಪುಗಳು ‘ಸಕಾರಾತ್ಮಕವಾಗಿ’ ಪ್ರತಿಕ್ರಿಯಿಸಿವೆ ಎಂದೂ ‘ಹಿಂದೂಸ್ತಾನ್ ಟೈಮ್ಸ್’ ವರದಿ ಹೇಳುತ್ತಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X