ಪೂರ್ವ ಇಂಫಾಲ ಜಿಲ್ಲೆಯ ಹಟ್ಟಾಕಾಂಗೈಬುಂಗ್‌ನಲ್ಲಿ ಜನವರಿ 14ರಂದು ಆರಂಭಗೊಳ್ಳುವ ರಾಹುಲ್ ಗಾಂಧಿಯವರ ಭಾರತ್ ನ್ಯಾಯ ಯಾತ್ರೆಗೆ ಮಣಿಪುರ ಸರ್ಕಾರ ಅನುಮತಿ ನಿರಾಕರಿಸಿದೆ.
ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ ಮೇಘಚಂದ್ರ ಅವರು ತಮ್ಮ ಪಕ್ಷದ ಪ್ರಮುಖ ನಾಯಕರೊಂದಿಗೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ಭೇಟಿ ನೀಡಿ ಅನುಮತಿ ಕೇಳಿದ್ದರು. ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಹಿನ್ನೆಲೆಯಲ್ಲಿಅನುಮತಿ ನೀಡಲು ಸಾಧ್ಯವಿಲ್ಲ ಎಂದು ಬಿರೇನ್ ಸಿಂಗ್ ತಿಳಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಘಚಂದ್ರ, ಅನುಮತಿ ನಿರಾಕರಿಸಿರುವ ಸರ್ಕಾರದ ಪ್ರತಿಕ್ರಿಯೆ ಅತೀ ದುರಾದೃಷ್ಟವಾಗಿದ್ದು, ನಾನು ಇಂಫಾಲದ ಬದಲಿಗೆ ತೌಬಲ್ ಜಿಲ್ಲೆಯ ಖೋಂಗ್‌ಜೋಮ್‌ನಲ್ಲಿರುವ ಖಾಸಗಿ ಸ್ಥಳಕ್ಕೆ ಸ್ಥಳವನ್ನು ಬದಲಾಯಿರುವುದಾಗಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಡುದ್ವೇಷದ ಕತ್ತಲ ಯುಗದಲ್ಲಿ ಬೆಳ್ಳಂಬೆಳಕಿನ ತೀರ್ಪು
ಕಾಂಗ್ರೆಸ್‌ನ ಭಾರತ್ ನ್ಯಾಯಯಾತ್ರೆ ಅನುಮತಿಯ ಬಗ್ಗೆ ಮಂಗಳವಾರ ಮಾತನಾಡಿದ್ದ ಮುಖ್ಯಮಂತ್ರಿ ಬಿರೇನ್ ಸಿಂಗ್, ಭದ್ರತಾ ಸಂಸ್ಥೆಗಳ ವರದಿಗಳನ್ನು ಸ್ವೀಕರಿಸಿದ ನಂತರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು. ಸದ್ಯ ಮಣಿಪುರದ ಕಾನೂನು ಮತ್ತು ಸುವ್ಯವಸ್ಥೆ ತುಂಬ ಕ್ಲಿಷ್ಟಕರವಾಗಿದೆ ಎಂದಿದ್ದರು.
ಜನವರಿ 14ರಂದು ಆರಂಭಗೊಳ್ಳುವ ಭಾರತ್ ನ್ಯಾಯ ಯಾತ್ರೆ ಬಸ್ ಹಾಗೂ ಪಾದಯಾತ್ರೆಯ ಮೂಲಕ 6713 ಕಿ.ಮೀ ಸಂಚರಿಸಲಿದೆ. 66 ದಿನಗಳು ನಡೆಯುವ ಯಾತ್ರೆಯು 110 ಜಿಲ್ಲೆಗಳು, 100 ಲೋಕಸಭಾ ಕ್ಷೇತ್ರಗಳು ಹಾಗೂ 337 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಳ್ಳಲಿದೆ. ಮಾರ್ಚ್ 20ರಂದು ಮುಂಬೈನಲ್ಲಿ ಅಂತಿಮಗೊಳ್ಳಲಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಪಕ್ಷದ ಪ್ರಮುಖ ನಾಯಕರೊಂದಿಗೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.