ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನ ನೀಡಿದ ಮಾರ್ಚ್ 27ರ ವಿವಾದಾತ್ಮಕ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಣಿಪುರ ಹೈಕೋರ್ಟ್ ರಾಜ್ಯದ ಬುಡಕಟ್ಟು ಸಂಘಟನೆಗಳಿಗೆ ಅನುಮತಿ ನೀಡಿದೆ.
ಮೈತೇಯಿಗಳಿಗೆ ಎಸ್‌ಟಿ ಸ್ಥಾನಮಾನ ನೀಡಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಈ ಆದೇಶದ ಬಳಿಕವೇ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು. ಕಳೆದ ಐದು ತಿಂಗಳಿಂದಲೂ ಮಣಿಪುರ ಆಂತರಿಕ ಕಲಹಕ್ಕೆ ದೂಡಲ್ಪಟ್ಟಿತು. ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಬಹುದೊಡ್ಡ ಬಿರುಕು ಮೂಡಿತು.
ಅಕ್ಟೋಬರ್ 19 ರಂದು, ನ್ಯಾಯಮೂರ್ತಿ ಅಹಂತೇಮ್ ಬಿಮೋಲ್ ಸಿಂಗ್ ಮತ್ತು ನ್ಯಾಯಮೂರ್ತಿ ಎ. ಗುಣೇಶ್ವರ್ ಶರ್ಮಾ ಅವರ ವಿಭಾಗೀಯ ಪೀಠವು ಅನುಮತಿಯನ್ನು ನೀಡಿದ್ದು, ತಮ್ಮ ಮನವಿಯನ್ನು ನೋಂದಾಯಿಸಲು ಬುಡಕಟ್ಟು ಸಂಸ್ಥೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಮೇಲ್ಮನವಿಯನ್ನು ವಿರೋಧಿಸಿರುವ ಮಣಿಪುರ ಸರ್ಕಾರ ಮತ್ತು ಮೈತೇಯಿ ಬುಡಕಟ್ಟು ಒಕ್ಕೂಟದ ಮನವಿಗಳನ್ನು ಕೋರ್ಟ್ ತಿರಸ್ಕರಿಸಿದೆ.
ಬುಡಕಟ್ಟು ಸಂಘಟನೆಗಳು ಮಂಡಿಸಿದ ಕುಂದುಕೊರತೆ ಮತ್ತು ವಾದಗಳನ್ನು ನ್ಯಾಯಾಲಯ ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಬಹುದು.
ಈ ವಿವಾದಾತ್ಮಕ ಆದೇಶವನ್ನು ಹಿಂದಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ.ವಿ. ಮುರಳೀಧರನ್ ಅವರು ನೀಡಿದ್ದರು. ನ್ಯಾಯಮೂರ್ತಿ ಮುರಳೀಧರನ್ ಅವರನ್ನು ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾಯಿಸಲು ಕೇಂದ್ರ ಸರ್ಕಾರವು ಈಗ ಸೂಚನೆ ನೀಡಿರುವುದರಿಂದ, ಮಣಿಪುರದ ಹೊಸ ಮುಖ್ಯ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಅವರು ವಿಚಾರಣೆಗೆ ಮೇಲ್ಮನವಿಯನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.
ಮಣಿಪುರದಲ್ಲಿ ನಡೆದಿರುವ ಜನಾಂಗೀಯ ಕಲಹದಿಂದಾಗಿ ಈವರೆಗೆ 180 ಮಂದಿ ಮೃತಪಟ್ಟಿದ್ದಾರೆ. ಲಕ್ಷಾಂತರ ಜನರು ಮನೆಗಳನ್ನು ಬಿಟ್ಟು ನಿರಾಶ್ರಿತ ಶಿಬಿರಗಳಿಗೆ ದೂಡಲ್ಪಟ್ಟಿದ್ದಾರೆ.
ಮೇ 3 ರಂದು ಹಿಂಸಾಚಾರ ಪ್ರಾರಂಭವಾದ ನಂತರ, ಅಖಿಲ ಮಣಿಪುರ ಬುಡಕಟ್ಟು ಒಕ್ಕೂಟ ನೇತೃತ್ವದ ವಿವಿಧ ಸಂಘಟನೆಗಳು, ವಿವಾದಿತ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿ ಮಣಿಪುರ ಹೈಕೋರ್ಟ್‌ಗೆ ಮನವಿ ಸಲ್ಲಿಸಿದವು. ಅಂತಿಮವಾಗಿ, ಅಕ್ಟೋಬರ್ 17 ರಂದು ನ್ಯಾಯಾಲಯವು ಅವರ ಮನವಿಯನ್ನು ಒಪ್ಪಿಕೊಂಡಿದೆ.