ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಕುಕಿ ಸಮುದಾಯವು ಹೆಚ್ಚಾಗಿರುವ ಎರಡು ಗ್ರಾಮಗಳಲ್ಲಿ ಹಲವಾರು ಮನೆಗಳಿಗೆ ಅಪರಿಚಿತ ದುಷ್ಕರ್ಮಿಗಳು ಬೆಂಕಿ ಹಚ್ಚಿ, ಸುಟ್ಟುಹಾಕಿದ್ದಾರೆ. ಘಟನೆ ಬೆನ್ನಲ್ಲೇ, ಪರಿಸ್ಥಿತಿ ಮತ್ತೆ ಉದ್ವಿಘ್ನಗೊಂಡಿದ್ದು, ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮ್ಯಾನ್ಮಾರ್ ಗಡಿಯ ಸಮೀಪವಿರುವ ಗ್ಯಾಂಪಾಲ್ ಮತ್ತು ಹೈಯಾಂಗ್ ಗ್ರಾಮಗಳಲ್ಲಿ ದುಷ್ಕರ್ಮಿಗಳು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆ ನಡೆದ ವೇಳೆ, ಹೆಚ್ಚಿನ ಗ್ರಾಮಸ್ಥರು ಕೃಷಿ ಕೆಲಸಗಳಿಗಾಗಿ ತಮ್ಮ ಹೊಲ-ಗದ್ದೆಗಳಿಗೆ ಹೋಗಿದ್ದರು. ಹೀಗಾಗಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಹಚ್ಚಿದವರು ಯಾರು ಎಂಬುದೂ ತಿಳಿದುಬಂದಿಲ್ಲ.
ಮನೆ ಕಳೆದುಕೊಂಡವರು ಆಕ್ರೋಶಗೊಂಡಿದ್ದಾರೆ. ಗ್ರಾಮದಲ್ಲಿ ಆಕ್ರೋಶ ಮಡುಗಟ್ಟಿದ್ದು, ವಾತಾವರಣ ಬಿಗಡಾಯಿಸಿದೆ. ಎರಡೂ ಗ್ರಾಮಗಳಲ್ಲಿ ಕಾಮ್ಜಾಂಗ್ ಜಿಲ್ಲಾಡಳಿತವು ಬಿಎನ್‌ಎಸ್‌ಎಸ್‌ನ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ರಂಗ್ನಮೀ ರಂಗ್ ಪೀಟರ್ ಅವರು ನಿಷೇಧಾಜ್ಞೆ ಹೊರಡಿಸಿದ್ದಾರೆ. ಯಾವುದೇ ವ್ಯಕ್ತಿ ತಮ್ಮ ನಿವಾಸಗಳ ಹೊರಗೆ ಓಡಾಡುವುದು, ಗುಂಪು ಸೇರುವುದು, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಚಟುವಟಿಕೆಗಳನ್ನು ಮಾಡುವಂತಿಲ್ಲವೆಂದು ನಿಷೇಧ ಹೇರಿದ್ದಾರೆ.
ಕುಕಿ ಇನ್ಪಿ ಮಣಿಪುರ, ಕುಕಿ ಸ್ಟೂಡೆಂಟ್ ಆರ್ಗನೈಸೇಷನ್ ಹಾಗೂ ಕುಕಿ-ಜೋ ಸಂಘಟನೆಗಳು ಘಟನೆಯನ್ನು ಖಂಡಿಸಿವೆ. ಮನೆ ಕಳೆದುಕೊಂಡವರಿಗೆ ಪುನರ್ವಸತಿ ಒದಗಿಸಬೇಕು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿವೆ.
ಈ ವರದಿ ಓದಿದ್ದೀರಾ?: 2014ರಿಂದ ಈವರೆಗೆ ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಭಯೋತ್ಪಾದಕರ ದಾಳಿಗಳು!
“ಈ ಘೋರ ದಾಳಿಗಳು ಮುಗ್ಧ ಕುಕಿ ಸಮುದಾಯದ ಜನರನ್ನು ಭಯಭೀತಗೊಳಿಸಿವೆ. ಈ ಪ್ರದೇಶದಲ್ಲಿ ಈಗಾಗಲೇ ಹದಗೆಟ್ಟಿರುವ ಶಾಂತಿ ಮತ್ತು ಸ್ಥಿರತೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಲಾಗಿದೆ. ಈ ಪ್ರದೇಶದಲ್ಲಿ ಆಡಳಿತವು ತಟಸ್ಥ ಭದ್ರತಾ ಪಡೆಗಳನ್ನು ನಿಯೋಜಿಸಬೇಕು” ಎಂದು ಸಂಘಟನೆಗಳು ಒತ್ತಾಯಿಸಿವೆ.
ಮಣಿಪುರದಲ್ಲಿ ಪ್ರಬಲ ಸಮುದಾಯವಾದ ಮೈಥೇಯಿ ಜನಾಂಗವನ್ನು ಎಸ್‌ಟಿ ಮೀಸಲಾತಿ ತರಲು 2023ರಲ್ಲಿ ಮಣಿಪುರ ಹೈಕೋರ್ಟ್ ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಮತ್ತು ತಮ್ಮ ಭೂಮಿಯ ಹಕ್ಕುಗಳನ್ನು ಮೈಥೇಯಿ ಸಮುದಾಯವು ಕಸಿದುಕೊಳ್ಳತ್ತದೆ ಎಂದು 2023ರ ಮೇ ತಿಂಗಳಿನಲ್ಲಿ ಕುಕಿ ಮತ್ತು ಮಿಜೋ ಸಮುದಾಯಗಳು ಪ್ರತಿಭಟನೆ ಆರಂಭಿಸಿದ್ದವು. ಶಾಂತಿಯುವ ಪ್ರತಿಭಟನೆ ಮೇಲೆ ದಾಳಿಗಳು ನಡೆದು, ಹಿಂಸಾಚಾರ ಭುಗಿಲೆದ್ದಿತು. ಅಂದಿನಿಂದ ಇಂದಿನ ವರೆಗೆ ದಾಳಿಗಳು ನಡೆಯುತ್ತಲೇ ಇವೆ. ಇದೂವರೆಗೆ ಸುಮಾರು 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆದಾಗ್ಯೂ, ಪ್ರಧಾನಿ ಮೋದಿ ಅವರು ಈವರೆಗೆ ಮಣಿಪುರಕ್ಕೆ ಭೇಟಿ ನೀಡಿಲ್ಲ.