ಮೈತೇಯಿ ಸಮುದಾಯದ ಅರಂಬಾಯಿ ತೆಂಗೋಲ್ ಸಂಘಟನೆಯ ನಾಯಕನ ಬಂಧನದ ವಿರುದ್ಧ ಮಣಿಪುರದಲ್ಲಿ ಪ್ರತಿಭಟನೆಗಳು ಹೆಚ್ಚಾದ ಹಿನ್ನೆಲೆ ರಾಜ್ಯದ ಐದು ಕಣಿವೆಯ ಜಿಲ್ಲೆಗಳ ಪ್ರಾದೇಶಿಕ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಶನಿವಾರ ರಾತ್ರಿ 11.45ರಿಂದ ಜಾರಿಗೆ ಬರುವಂತೆ 5 ದಿನಗಳವರೆಗೆ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೌಬಲ್, ಬಿಷ್ಣುಪುರ ಮತ್ತು ಕಕ್ಟಿಂಗ್ ಜಿಲ್ಲೆಗಳಲ್ಲಿ ವಿಎಸ್‌ಎಟಿ, ವಿಪಿಎನ್ ಸೇರಿದಂತೆ ಇಂಟರ್‌ನೆಟ್ ಹಾಗೂ ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮೋದಿ ಶರಣಾಗಿದ್ದಾರೆ’ ಎಂಬ ರಾಹುಲ್ ಹೇಳಿಕೆಯು ಹಲವು ಪ್ರಶ್ನೆಗಳನ್ನು ಎತ್ತುತ್ತದೆ
ಕೆಲವು ಸಮಾಜ ವಿರೋಧಿ ಶಕ್ತಿಗಳು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ದ್ವೇಷ ಭಾಷಣ ಮತ್ತು ದ್ವೇಷದ ವೀಡಿಯೋಗಳನ್ನು ಪ್ರಸಾರ ಮಾಡಿ ಸಾರ್ವಜನಿಕರನ್ನು ಕೆರಳಿಸುವ ಶಂಕೆ ಹೆಚ್ಚಿದೆ. ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆದೇಶವನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಆಯುಕ್ತ ಎನ್.ಅಶೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನಾಕಾರರು ಮೈತೆಯಿ ಸ್ವಯಂಸೇವಕ ಗುಂಪು ಅರಂಬಾಯಿ ತೆಂಗೋಲ್‌ಗೆ ಸೇರಿದವರಾಗಿದ್ದು, ತಮ್ಮ ನಾಯಕನ ಬಿಡುಗಡೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೇ ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಇದೇ ಗುಂಪು ಹಿಂದಿನ ಜನಾಂಗೀಯ ಹಿಂಸಾಚಾರದ ಸಮಯದಲ್ಲಿ ಕುಕಿ ಗ್ರಾಮಗಳ ಮೇಲೆ ದಾಳಿ ಮಾಡಿದ ಆರೋಪವನ್ನು ಕೂಡ ಹೊಂದಿದೆ.
ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 258 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 5,600 ಕ್ಕೂ ಹೆಚ್ಚು ಸರ್ಕಾರಿ ಶಸ್ತ್ರಾಸ್ತ್ರಗಳು ಮತ್ತು 6.5 ಲಕ್ಷ ಸುತ್ತು ಮದ್ದುಗುಂಡುಗಳನ್ನು ಲೂಟಿ ಮಾಡಲಾಗಿದೆ. 60,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಸಾವಿರಾರು ಜನರು ಇನ್ನೂ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.