ಮಣಿಪುರದ ಅರಣ್ಯ ಪ್ರದೇಶದಲ್ಲಿ ಕಟ್ಟಿಗೆ ಸಂಗ್ರಹಿಸಲು ತೆರಳಿದ್ದ ಮೂವರನ್ನು ಸೋಮವಾರ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಘಟನೆಯ ಬೆನ್ನಲ್ಲೇ ಆಕ್ರೋಶಗೊಂಡ ಸ್ಥಳೀಯರು ಇಬ್ಬರ ಮೃತದೇಹಗಳನ್ನು ರಾಜಧಾನಿ ಇಂಫಾಲ್‌ನಲ್ಲಿರುವ ಮುಖ್ಯಮಂತ್ರಿ ನಿವಾಸದ ಮುಂದೆ ಇರಿಸಿ ಪ್ರತಿಭಟನೆ ನಡೆಸಿದ್ದಾರೆ.
ಇಂಫಾಲ್ ಪೂರ್ವ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಗಳ ಗಡಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಕಟ್ಟಿಗೆ ಸಂಗ್ರಹಿಸುತ್ತಿದ್ದ ಗುಂಪಿನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೃತರನ್ನು ಅರುಬಮ್ ರೋನಿಲ್ (35), ಲೈರೆನ್‌ಲಕ್ಪಮ್ ಇನಾಬಿ (51) ಮತ್ತು ಕ್ಷೇತ್ರಿಮಯುಮ್ ಸುಶೀಲ್ (32) ಎಂದು ಗುರುತಿಸಲಾಗಿದೆ. ರೋನಿಲ್ ಮತ್ತು ಇನಾಬಿ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಸುಶೀಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಳಿಯಲ್ಲಿ ಗಾಯಗೊಂಡಿರುವ ಎನ್. ಸುರಜ್ (19), ಮೀಸ್ನಮ್ ಸೋಮೇಂದ್ರೊ (53) ಮತ್ತು ಕೆ. ಬೋಸನ್ (45) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ಗ್ರಾಮದ ಸಮೀಪದ ಬೆಟ್ಟ ಪ್ರದೇಶಕ್ಕೆ 16 ಮಂದಿ ಕಟ್ಟಿಗೆ ಸಂಗ್ರಹಿಸಲು ತೆರಳಿದ್ದರು. ಈ ವೇಳೆ ಅವರ ಮೇಲೆ ಹೊಂಚು ಹಾಕಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಮೃತದೇಹಗಳನ್ನು ರಾಜ್ಯ ರಾಜಧಾನಿ ಇಂಫಾಲ್‌ಗೆ ತಂದು, ಬಾಬುಪಾರಾದಲ್ಲಿರುವ ಮುಖ್ಯಮಂತ್ರಿ ನಿವಾಸದ ಮುಖ್ಯ ದ್ವಾರದ ಮುಂದೆ ಇರಿಸಿ ಪ್ರತಿಭಟನೆ ನಡೆಸಿದರು. 2023ರ ಮೇ ತಿಂಗಳಿನಿಂದ ರಾಜ್ಯದಲ್ಲಿ ಮುಂದುವರಿದಿರುವ ಹಿಂಸಾಚಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ಬಳಿಕ ಮುಖ್ಯಮಂತ್ರಿ ವೈ. ಖೇಮಚಂದ್ ಸಿಂಗ್ ಅವರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದರು. ಆದರೆ, ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಲಿಲ್ಲ.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹಲವು ಸುತ್ತು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದರು. ಬಳಿಕ ಮೃತದೇಹಗಳನ್ನು ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (JNIMS) ಕೊಂಡೊಯ್ಯಲಾಯಿತು. ಘಟನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿವಾಸ ಹಾಗೂ ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಇನ್ನೊಂದೆಡೆ, ಖುರೈ ಲಾಮ್ಲಾಂಗ್ ಪ್ರದೇಶದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಇಂಫಾಲ್‌ನ ಎಮಾ ಕೈಥೆಲ್ ಮಾರುಕಟ್ಟೆಯಲ್ಲೂ ಮಹಿಳೆಯರ ಗುಂಪೊಂದು ಪ್ರತಿಭಟನೆ ನಡೆಸಿತು. ಘಟನೆಯ ಬಳಿಕ ಇಂಫಾಲ್‌ನಾದ್ಯಂತ ಮಾರುಕಟ್ಟೆಗಳು ಮತ್ತು ಅಂಗಡಿಗಳು ಮುಚ್ಚಲ್ಪಟ್ಟವು.
ಇದನ್ನೂ ಓದಿ: ಮಣಿಪುರ | ಜನಾಂಗೀಯ ಕಿಚ್ಚಿಗೆ ದ್ವೇಷ ರಾಜಕಾರಣದ ತುಪ್ಪ; ರಾಜ್ಯವನ್ನು ಪ್ರಪಾತಕ್ಕೆ ತಳ್ಳಿದ ಬಿಜೆಪಿ ಧೋರಣೆ
2023ರ ಮೇ ತಿಂಗಳಿಂದ ಮಣಿಪುರದಲ್ಲಿ ಭುಗಿಲೆದ್ದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರವು ಇನ್ನೂ ಪೂರ್ಣ ಪ್ರಮಾಣದಲ್ಲಿ ಶಮನಗೊಂಡಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ರಾಜ್ಯ ರಾಜಧಾನಿ ಇಂಫಾಲ್‌ನಿಂದ ಕೆಲವೇ ದೂರದಲ್ಲಿ, ಅದು ಅರಣ್ಯ ಪ್ರದೇಶದಲ್ಲಿ ದೈನಂದಿನ ಕೆಲಸಕ್ಕಾಗಿ ತೆರಳಿದ್ದ ಸಾಮಾನ್ಯ ದಿನಗೂಲಿ ಕಾರ್ಮಿಕರು ಅಥವಾ ಗ್ರಾಮಸ್ಥರ ಮೇಲೆ ಈ ರೀತಿ ಹೊಂಚು ಹಾಕಿ ದಾಳಿ ನಡೆಸಿರುವುದು ಅಲ್ಲಿನ ಭದ್ರತಾ ವ್ಯವಸ್ಥೆಯ ವೈಫಲ್ಯವನ್ನು ಹಾಗೂ ಗುಪ್ತಚರ ದಳದ ವೈಫಲ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಮಣಿಪುರ ಬಿಕ್ಕಟ್ಟಿನಲ್ಲಿ ಸ್ಥಳೀಯ ಮಹಿಳಾ ಸಂಘಟನೆಗಳು (ಮೀರಾ ಪೈಬಿ ಮುಂತಾದವು) ಅತ್ಯಂತ ಸಕ್ರಿಯವಾಗಿ ಧ್ವನಿ ಎತ್ತುತ್ತ ಬಂದಿವೆ. ಈಗಿನ ಘಟನೆಯ ನಂತರವೂ ಇಂಫಾಲ್‌ನ ಪ್ರಸಿದ್ಧ ‘ಎಮಾ ಕೈಥೆಲ್’ (ಮಹಿಳೆಯರ ಮಾರುಕಟ್ಟೆ) ಸೇರಿದಂತೆ ಇಡೀ ನಗರದ ಮಾರುಕಟ್ಟೆಗಳು ಮತ್ತು ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿರುವುದು, ಅಲ್ಲಿನ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ ಹಾಗೂ ಭಯದ ವಾತಾವರಣ ಮುಂದುವರಿದಿದೆ ಎಂಬುದನ್ನು ಬಿಂಬಿಸುತ್ತದೆ.





