ಮಣಿಪುರದಲ್ಲಿ ಎರಡೂವರೆ ವರ್ಷಗಳಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಕುಕಿ ಸಮುದಾಯದ ಮೇಲೆ ಪ್ರಬಲ ಮೈಥೇಯಿ ಸಮುದಾಯ ದಾಳಿ, ದೌರ್ಜನ್ಯಗಳನ್ನು ನಡೆಸುತ್ತಿದೆ. ಶಾಂತಿ ಸ್ಥಾಪನೆಗೆ ಪ್ರಯತ್ನಗಳು ನಡೆಯುತ್ತಿದ್ದರೂ, ಹಿಂಸಾಚಾರ ಮುಂದುವರೆದಿದೆ. ಇದೀಗ, ಕುಕಿ ಸಮುದಾಯವು ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿದ್ದು, ಪಟ್ಟು ಹಿಡಿದಿದೆ.
ಶಾಂತಿ ಸ್ಥಾಪನೆ ಮತ್ತು ಕಂಗ್ ಪೋಕ್ಪಿ ಪ್ರದೇಶದಲ್ಲಿನ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಕುಕಿ ಝೋ ಸಮುದಾಯದ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಕುಕಿ ಸಮುದಾಯದ ಮೇಲೆ ಮತ್ತೆ ದಾಳಿ ನಡೆದಿದೆ. ಹೀಗಾಗಿ, ಮೈಥೇಯಿ ಪ್ರಾಬಲ್ಯ ಇರುವ ಪ್ರದೇಶವನ್ನು ಬಿಟ್ಟು, ಕುಕಿ ಸಮುದಾಯ ಹೆಚ್ಚಾಗಿ ನೆಲೆಸಿರುವ ಗುಡ್ಡಗಾಡು ಪ್ರದೇಶವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂದು ಕುಕಿ ಸಮುದಾಯ ಮಟ್ಟು ಹಿಡಿದಿದೆ.
ಕುಕಿ ಸಮುದಾಯದ ಈ ಬೇಡಿಕೆಯಿಂದಾಗಿ ಈಗ ಮಾತಕತೆಗಳು ವಿಫಲವಾಗಿವೆ ಎಂದು ಹೇಳಲಾಗಿದೆ. ಸಂವಿಧಾನಾತ್ಮಕ ಚೌಕಟ್ಟಿಗೆ ವಿರುದ್ಧವಾಗಿ ಕುಕಿ ಸಮುದಾಯವು ಬೇಡಿಕೆ ಇಟ್ಟಿದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿರುವುದಾಗಿ ವರದಿಯಾಗಿದೆ.
ಸಂವಿಧಾನದ ಚೌಕಟ್ಟಿನಲ್ಲಿಯೇ ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಮಾತುಕತೆ ನಡೆಸಲಾಗುತ್ತದೆ. ಶಾಂತಿ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ. ಕುಕಿ ಸಮುದಾಯದ ಸ್ವಾಯತ್ತತೆ, ವಿಶಿಷ್ಟ ಸಂಸ್ಕೃತಿ, ಪರಂಪರೆ ಹಾಗೂ ಭಾಷೆಯನ್ನು ಸಂರಕ್ಷಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ.