ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದು ಶನಿವಾರ ನಸುಕಿನಲ್ಲಿ ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಪೊಲೀಸ್ ಔಟ್‌ಪೋಸ್ಟ್, ಅರಣ್ಯ ಬೀಟ್ ಕಚೇರಿ ಮತ್ತು ಅರಣ್ಯ ವ್ಯಾಪ್ತಿಯ ಕಚೇರಿಯನ್ನು ಸುಟ್ಟು ಹಾಕಿದ್ದಾರೆ.
ನಾಲ್ಕೈದು ಗ್ರಾಮಗಳಲ್ಲಿ ಸುಮಾರು ಹನ್ನೆರಡು ಮನೆಗಳಿಗೂ ಬೆಂಕಿ ಹಚ್ಚಲಾಗಿದೆ. ಈ ಮನೆಗಳು ಮೈತಿ ಸಮುದಾಯದವರಿಗೆ ಸೇರಿದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಸಂಜೆ ಸೋಬಮ್ ಶರತ್‌ಕುಮಾರ್ ಸಿಂಗ್ (59) ಎಂಬ ಮೈತಿ ಸಮುದಾಯದ ವ್ಯಕ್ತಿಯ ಕೊಲೆಯಾದ ಬಳಿಕ ಹಿಂಸಾಚಾರ ಮತ್ತೆ ಆರಂಭವಾಗಿದೆ. ಹತ್ಯೆಯ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ಅಲ್ಲಲ್ಲಿ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಹಾಗೆಯೇ ಜಿರಿಬಾಮ್ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರದಲ್ಲಿ ಮಕಾಡೆ ಮಲಗಿದ ಬಿಜೆಪಿ
ಮತ್ತೆ ಹಿಂಸಾಚಾರ ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಅನಿರ್ದಿಷ್ಟ ಅವಧಿಗೆ ಕರ್ಫ್ಯೂ ವಿಧಿಸಲಾಗಿದೆ. ಇನ್ನು ಮನೆಗೆ ಬೆಂಕಿ ಬೀಳುತ್ತಿದ್ದಂತೆ ಮನೆ ಕಳೆದುಕೊಂಡ, ಹಿಂಸಾಚಾರದಿಂದಾಗಿ ಅಪಾಯದಲ್ಲಿದ್ದ, ಹತ್ತಿರದ ಹಳ್ಳಿಯ 200ಕ್ಕೂ ಹೆಚ್ಚು ಜನರನ್ನು ಜಿರಿಬಾಮ್ ಪಟ್ಟಣದ ತಾತ್ಕಾಲಿಕ ಆಶ್ರಯದಲ್ಲಿ ನೆಲೆಸಿದ್ದಾರೆ.
“ಸರ್ಕಾರದಿಂದ ಆಹಾರ, ಹಾಸಿಗೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪರಿಸ್ಥಿತಿ ಸಹಜವಾದ ನಂತರ ಅವರು ತಮ್ಮ ಗ್ರಾಮಗಳಿಗೆ ಮರಳುತ್ತಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಆದರೆ ಅನಿರೀಕ್ಷಿತವಾಗಿದೆ. ಪೀಡಿತ ಪ್ರದೇಶಗಳಿಗೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗುತ್ತಿದೆ” ಎಂದು ಜಿಲ್ಲಾಧಿಕಾರಿ ಕೃಷ್ಣ ಕುಮಾರ್ ಮಾಹಿತಿ ನಿಡಿದ್ದಾರೆ.