ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕುಕಿ ಸಮುದಾಯದ ಮೇಲೆ ಮೈಥೇಯಿ ಸಮುದಾಯದ ದಾಳಿಗಳು ಮುಂದುರೆದಿವೆ. ಕುಕಿ ಸಮುದಾಯವು ಪ್ರತಿಭಟನೆ ನಡೆಸುತ್ತಿದೆ. ಹೆದ್ದಾರಿಗಳು ಬಂದ್ ಆಗಿವೆ. ಪರಿಸ್ಥಿತಿಯನ್ನು ತಿಳಿಗೊಳಿಸಿ, ಹೆದ್ದಾರಿಗಳಲ್ಲಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆಂದು ಸರ್ಕಾರಿ ಅಧಿಕಾರಿಗಳು ಹಲವು ದಿನಗಳಿಂದ ಹೇಳುತ್ತಲೇ ಇದ್ದಾರೆ. ಆದರೆ, ಎಷ್ಟೇ ಮಾತುಕತೆಗಳು ನಡೆದಿದ್ದರೂ, ಪರಿಸ್ಥಿತಿ ಹತೋಟಿಗೆ ಬಂದಿಲ್ಲ. ಹೆದ್ದಾರಿಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವ್ಯಾಪಾರ-ವಹಿವಾಟಿನ ಮೇಲೂ ಭಾರೀ ಪರಿಣಾಮ ಬೀರಿದೆ.
ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿರುವ ಮಣಿಪುರದಲ್ಲಿ, ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮಾರ್ಚ್ 7ರಂದು ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ದಾಳಿಯಲ್ಲಿ ಕುಕಿ ಸಮುದಾಯದ ಮುಖಂಡರೊಬ್ಬರು ಸಾವನ್ನಪ್ಪಿದ್ದಾರೆ. ಹಿಂಸಾಚಾರದ ವಿರುದ್ಧ ಕುಕಿ-ಝೋ ಪ್ರದೇಶದ ಜನರು ಪ್ರತಿಭಟನೆಗೆ ಇಳಿದಿದ್ದಾರೆ. ಹಿಂಸಾಚಾರ ಮತ್ತು ಪ್ರತಿಭಟನೆಯಿಂದಾಗಿ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು (NH-2 ಮತ್ತು NH-37) ಮಂಗಳವಾರ – ಸತತ ನಾಲ್ಕನೇ ದಿನವೂ ಬಂದ್ ಆಗಿವೆ. ವಾಹನ ಸಂಚಾರ ಸ್ಥಗಿತಗೊಂಡಿದೆ. ಪರಿಣಾಮ, ಸರಕು ವಾಹನಗಳು ಸೇರಿದಂತೆ ಎಲ್ಲ ರೀತಿಯ ವಾಹನಗಳು ರಸ್ತೆಯಲ್ಲಿ ಸಂಚಾರಿಸಲಾಗದೆ, ನಿಂತಿವೆ.
ಶೀಘ್ರವಾಗಿ ಪರಿಸ್ಥಿತಿಯನ್ನು ತಿಳಿಗೊಳಿಸುತ್ತೇವೆ. ಹೆದ್ದಾರಿಗಳಲ್ಲಿ ಎಲ್ಲ ರೀತಿಯ ವಾಹನಗಳ ಮುಕ್ತ ಸಂಚಾರವನ್ನು ಪುನರಾರಂಭಿಸುತ್ತೇವೆ ಎಂದು ಅಧಿಕಾರಿಗಳು ಭಾನುವಾರ ಭರವಸೆ ನೀಡಿದ್ದರು. ಪ್ರತಿಭಟನೆ ನಡೆಸುತ್ತಿರುವ ಕುಕಿ-ಝೋ ಸಂಘಟನೆಯ ಮುಖಂಡರೊಂದಿಗೆ ಮಾತಕತೆಯನ್ನೂ ನಡೆಸಿದ್ದರು. ಆದಾಗ್ಯೂ, ವಾಹನಗಳು ರಸ್ತೆಗಳಿಯಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.
ಮಾತುಕತೆಯ ಬಳಿಕ ಕುಕಿ-ಝೋ ಸಂಘಟನೆಯು ಮಣಿಪುರ ರಾಜ್ಯ ಸಾರಿಗೆ (ಎಂಎಸ್‌ಟಿ) ಬಸ್‌ಗಳ ಸುಗಮ ಸಂಚಾರಕ್ಕೆ ಅವಕಾಶ ನೀಡುವುದಾಗಿ ಒಪ್ಪಿಕೊಂಡಿವೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ, 2023ರ ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು. ಅಂದಿನಿಂದ ನಿರಂತರವಾಗಿ ದಾಳಿ, ಹಿಂಸೆ, ಹತ್ಯೆಗಳು ನಡೆಯುತ್ತಲೇ ಇವೆ. ರಾಜ್ಯದಲ್ಲಿ ಈವರೆಗೆ ಸುಮಾರು 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದಾಗ್ಯೂ, ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ ಮೋದಿ ಈವರೆಗೆ ಭೇಟಿ ನೀಡಿಲ್ಲ. ಹಿಂಸಾಚಾರ ತೆಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿಲ್ಲ. ಹಿಂಸಾಚಾರ ಆರಂಭವಾಗಿ ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಅಲ್ಲಿನ ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್ ಸಿಂಗ್ ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. ಇದೀಗ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. ಆದರೂ, ಹಿಂಸಾಚಾರಕ್ಕೆ ಕಣಿವಾಣ ಬಿದ್ದಿಲ್ಲ.