ಕೇರಳ ಕರ್ನಾಟಕದ ಗಡಿ ಜಿಲ್ಲೆಯಾದ ಕಾಸರಗೋಡಿನ ಮಂಜೇಶ್ವರ ವಾಮಂಜೂರು ಅಬಕಾರಿ ಚೆಕ್ ಪೋಸ್ಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿ, ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಸೋಮವಾರ ರಾತ್ರಿ 10.30 ರ ಸುಮಾರಿಗೆ ಕಾಸರಗೋಡು ಭಾಗದಿಂದ ಅತಿ ವೇಗದಲ್ಲಿ ಮಂಗಳೂರು ಕಡೆಗೆ ಚಲಿಸುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಹೊಸಂಗಡಿ ವಾಮಂಜೂರು ಅಬಕಾರಿ ಚೆಕ್ ಪೋಸ್ಟ್ ಸಮೀಪದ ಡಿವೈಡರ್‌ಗೆ ಡಿಕ್ಕಿ ಹೊಡೆದದ್ದರಿಂದ ಈ ಅವಘಡ ಸಂಭವಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಒಬ್ಬನನ್ನು ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೈವಳಿಕೆ ಬಾಯಿಕಟ್ಟೆ ನಿವಾಸಿಗಳಾದ ಜನಾರ್ಧನ, ಪುತ್ರ ಪುತ್ರ ವರುಣ್ ಹಾಗೂ ಕಿಶನ್ ಸಾವನ್ನಪ್ಪಿದ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ರತ್ನಂ ಎಂಬಾತನನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ರಭಸಕ್ಕೆ ಕಾರು ನುಜ್ಜು ಗುಜ್ಜಾಗಿ ಕಾರಿನ ಒಳಗಿದ್ದವರು ರಸ್ತೆಗೆಸೆಯಲ್ಪಟ್ಟಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ವರುಣ್ ಎಂಬಾತನನ್ನು ಮಂಗಳೂರಿಗೆ ಕರೆದೊಯ್ಯುವ ಸಲುವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮಂಜೇಶ್ವರದ ಮಧ್ಯೆ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಮಂಜೇಶ್ವರ ಪೊಲೀಸರು ಹಾಗೂ ಸ್ಥಳೀಯರು ಸೇರಿ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಹಾಗೂ ಮೃತದೇಹಗಳನ್ನು ಶವಾಗಾರಕ್ಕೆ ಸಾಗಿಸುವಲ್ಲಿ ನೆರವಾದರು.

ಘಟನೆಯ ಸಂಬಂಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ರೀತಿಯ ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದರೂ ಸರಿಯಾದ ಸೂಚನಾ ಫಲಕ ಹಾಕದೇ ಇರುವುದರಿಂದಾಗಿ ಇಂತಹ ಭೀಕರ ಅಪಘಾತ ಸಂಭವಿಸುತ್ತಿದೆ. ಹಾಗಾಗಿ, ಕೂಡಲೇ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
