ಕೈಯಲ್ಲಿ ಮಲ ಬಾಚುವಿಕೆ, ಮಲದ ಗುಂಡಿಗಳಿಗೆ ಪೌರ ಕಾರ್ಮಿಕರನ್ನು ಇಳಿಸುವುದನ್ನು ಕಾನೂನಾತ್ಮಕವಾಗಿ ನಿಷೇಧಿಸಿದ್ದರೂ, ಈ ಅನಿಷ್ಟ ಪದ್ದತಿ ಇನ್ನೂ ಜೀವಂತವಾಗಿದೆ. ಸರ್ಕಾರಿ ಅಧಿಕಾರಿಗಳು ಸೇರಿದಂತೆ ಪ್ರಬಲರು ಪೌರ ಕಾರ್ಮಿಕರನ್ನು ಕೊಳಚೆ ಗುಂಡಿಗಳಿಗೆ ಇಳಿಸಿ, ಕೆಲಸ ಮಾಡಿಸುವುದು ಈಗಲೂ ಅಲ್ಲಲ್ಲಿ ವರದಿಯಾಗುತ್ತಿದೆ.
ಅಂಥದ್ದೇ ದುರ್ಘಟನೆಯೊಂದು ಬಿಹಾರ ರಾಜ್ಯದಲ್ಲಿ ನಡೆದಿದೆ. ಅಲ್ಲಿನ ಸೂರತ್ ಜಿಲ್ಲೆಯ ಪಲ್ಸಾನಾ ಪ್ರದೇಶದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಕಾರ್ಮಿಕರನ್ನು ಇಳಿಸಲಾಗಿದ್ದು, ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಪಲ್ಸಾನಾ-ಕಟೋದರ ರಸ್ತೆಯಲ್ಲಿರುವ ಕಾರ್ಖಾನೆಯಲ್ಲಿ ಮಂಗಳವಾರ ಘಟನೆ ನಡೆದಿದೆ. ಕಾರ್ಖಾನೆಯ ಡೈಯಿಂಗ್ ಘಟಕದಲ್ಲಿ ಸೆಪ್ಟಿಕ್ ಟ್ಯಾಂಕ್‌ಗೆ ಕಾರ್ಮಿಕರನ್ನು ಇಳಿಸಲಾಗಿದ್ದು, ಟ್ಯಾಂಕ್‌ನಲ್ಲಿಯೇ ನಾಲ್ವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಇಬ್ಬರು ಕಾರ್ಮಿಕರು ಪ್ರಜ್ಞಾಹೀನರಾಗಿದ್ದರು. ಅವರನ್ನು ರಕ್ಷಿಸಲು ಇನ್ನಿಬ್ಬರು ಟ್ಯಾಂಕ್‌ಗೆ ಇಳಿದಿದ್ದು, ಅವರೂ ಮೂರ್ಛೆ ಹೋಗಿದ್ದರು ಎಂದು ಪನ್ಸಾಲಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಲ್ವರನ್ನೂ ಟ್ಯಾಂಕ್‌ನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅವರು ಸಾವನ್ನಪ್ಪಿದ್ದಾರೆಂದು ವೈದ್ಯರು ಖಾತ್ರಿಪಡಿಸಿದರು ಎಂದು ಅವರು ತಿಳಿಸಿದ್ದಾರೆ.
ಮೃತರು ಬಿಹಾರ ಮೂಲದವರಾಗಿದ್ದು, ಅವರ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಲ ಬಾಚುವ ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯಿದೆ-2013ಯ ಮೂಲಕ ಕೈಗಳಲ್ಲಿ ಮಲ ಬಾಚುವಿಕೆಯನ್ನು ನಿಷೇಧಿಸಲಾಗಿದೆ. ರಕ್ಷಣಾತ್ಮಕ ಸಾಧನಗಳಿಲ್ಲದೆ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಕೈಗಳಿಂದ ಸ್ವಚ್ಛಗೊಳಿಸುವುದು ಮತ್ತು ಸ್ವಚ್ಛಗೊಳಿಸುವಂತೆ ಮಾಡುವುದು ಅಪರಾಧವಾಗಿದೆ.