ಮಾವೋವಾದಿಗಳ ಜೊತೆ ನಂಟು ಹೊಂದಿದ್ದಾರೆಂಬ ಆರೋಪ ಪ್ರಕರಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್ ಸಾಯಿಬಾಬಾ ಮತ್ತು ಐವರನ್ನು ಬಾಂಬೆ ಹೈಕೋರ್ಟ್ ಪ್ರಕರಣದಿಂದ ಖುಲಾಸೆಗೊಳಿಸಿದೆ. ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿದೆ.
ಪ್ರಕರಣದ ವಿಚಾಣೆ ನಡೆಸಿದ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ನ್ಯಾಯಮೂರ್ತಿ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್‌ಎ ಮೆನೇಜಸ್ ಅವರು ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲರನ್ನೂ ಖುಲಾಸೆಗೊಳಿಸಿದ್ದಾರೆ.
ಎಲ್ಲ ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಮಂಜಸವಾದ ಸಾಕ್ಷ್ಯಗಳೊಂದಿಗೆ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಪೀಠವು ಹೇಳಿದೆ. ಸಾಯಿಬಾಬಾ ಅವರನ್ನು ದೂಷಿ ಎಂದು ನಿರ್ಧಿಸಿ 2017ರಲ್ಲಿ ನಾಗ್ಪುರ ಸೆಷನ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ.
ಸಾಯಿಬಾಬಾ ಮತ್ತು ಇತರರ ವಿರುದ್ಧ ಕಟ್ಟುನಿಟ್ಟಾದ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ (ಯುಎಪಿಎ) ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಲ್ಲಿಸಿರುವ ದಾಖಲೆಗಳು ‘ಶೂನ್ಯ ಮತ್ತು ಮತ್ತು ಅನೂರ್ಜಿತ’ ಎಂದು ಪೀಠವು ಪರಿಗಣಿಸಿದೆ.
2022ರ ಅಕ್ಟೋಬರ್ 14ರಂದು ಬಾಂಬೆ ಹೈಕೋರ್ಟ್‌ನ ಮತ್ತೊಂದು ಪೀಠವು ಸಾಯಿಬಾಬಾ ಅವರನ್ನು ದೋಷಮುಕ್ತಗೊಳಿಸಿತ್ತು. ಆ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು. ಬಳಿಕ, 2023ರಲ್ಲಿ ಸಾಯಿಬಾಬಾ ಅವರು ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ, ಪ್ರಕರಣವನ್ನು ಹೊಸದಾಗಿ ಆಲಿಸಲು ಸುಪ್ರೀಂ ಕೋರ್ಟ್, ಬಾಂಬೆ ಹೈಕೋರ್ಟ್‌ಗೆ ನಿರ್ದೇಶನ ನೀಡಿತ್ತು.
ಈ ಸುದ್ದಿ ಓದಿದ್ದೀರಾ?: ಪ್ರಧಾನಿ ಎಂದರೆ ದೊಡ್ಡಣ್ಣನಿದ್ದಂತೆ: ಮೋದಿಯನ್ನು ಹೊಗಳಿದ ತೆಲಂಗಾಣ ಸಿಎಂ!
ಇದೀಗ, ಪ್ರಕರಣವನ್ನು ಮತ್ತೆ ಆಲಿಸಿದ ಹೈಕೋರ್ಟ್‌ನ ವಿಭಾಗೀಯ ಪೀಠ, ಅವರನ್ನು ನಿರ್ದೋಷಿಯೆಂದು ಹೇಳಿದೆ. ಪ್ರಕರಣವನ್ನು ಖುಲಾಸೆಗೊಳಿಸಿದೆ.
ದೈಹಿಕ ಅಸಾಮರ್ಥ್ಯತೆಗೆ ತುತ್ತಾಗಿರುವ 54 ವರ್ಷದ ಸಾಯಿಬಾಬಾ ಅವರು 2014ರಿಂದ ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು, ನಾಗ್ಪುರ ಕೇಂದ್ರ ಕಾರಾಗೃಹದಲ್ಲಿದ್ದಾರೆ.