ಮದುವೆಯಾಗುವ ಆಮಿಷವೊಡ್ಡಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳಿಂದ ಬರೋಬ್ಬರಿ 24 ಲಕ್ಷ ರೂಪಾಯಿ ವಂಚಿಸಿದ 23 ವರ್ಷದ ಯುವಕನೊಬ್ಬನನ್ನು ದೆಹಲಿ ಪೊಲೀಸರು ಬುರಾರಿ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ವಿಕ್ರಾಂತ್ ತೋಮರ್ ಎಂದು ಗುರುತಿಸಲಾಗಿದ್ದು, ಈತ ತನ್ನನ್ನು ತಾನು ಶ್ರೀಮಂತ ಉದ್ಯಮಿ ಎಂದು ಬಿಂಬಿಸಿಕೊಂಡು ಒಂದೇ ಬ್ಯಾಚ್‌ನ ಸುಮಾರು 20 ಮಹಿಳಾ ಕಾನ್‌ಸ್ಟೆಬಲ್‌ಗಳಿಗೆ ವಂಚಿಸಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ದುಬಾರಿ ಕಾರುಗಳು ಮತ್ತು ಐಷಾರಾಮಿ ಜೀವನಶೈಲಿಯ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದ ಆರೋಪಿ ವಿಕ್ರಾಂತ್, ತಾನೊಬ್ಬ ದೊಡ್ಡ ಉದ್ಯಮಿ ಎಂದು ನಂಬಿಸುತ್ತಿದ್ದ. ಆ ಮೂಲಕ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಆಕರ್ಷಿಸಿ, ಮದುವೆಯಾಗುವ ಭರವಸೆ ನೀಡಿ ಅವರ ವಿಶ್ವಾಸ ಗಳಿಸುತ್ತಿದ್ದ. ಬಳಿಕ ವಿವಿಧ ನೆಪಗಳನ್ನು ಹೇಳಿ ಅವರಿಂದ ಹಣ ಸುಲಿಗೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿಕ್ರಾಂತ್‌ನ ಲಿವ್-ಇನ್ ಸಂಗಾತಿ ಕೂಡ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದಾಳೆ. ಆಕೆಯ ಮೂಲಕವೇ ಆಕೆಯ ಬ್ಯಾಚ್‌ಮೇಟ್‌ಗಳ (ಸಹಪಾಠಿಗಳ) ಮಾಹಿತಿಯನ್ನು ಕಲೆಹಾಕುತ್ತಿದ್ದ ಈತ, ಅವರನ್ನೇ ಗುರಿಯಾಗಿಸಿಕೊಂಡು ವಂಚನೆ ಜಾಲ ಹೆಣೆದಿದ್ದ. ಈತನ ವಂಚನೆಗೊಳಗಾದ ಎಲ್ಲಾ ಮಹಿಳೆಯರೂ ಒಂದೇ ಬ್ಯಾಚ್‌ಗೆ ಸೇರಿದವರಾಗಿದ್ದಾರೆ. ಸುಮಾರು 20 ಕಾನ್‌ಸ್ಟೆಬಲ್‌ಗಳು ಈತನ ಬಲೆಗೆ ಬಿದ್ದಿರುವ ಸಾಧ್ಯತೆಯಿದ್ದು, ಹಲವರು ಇನ್ನೂ ದೂರು ದಾಖಲಿಸಲು ಮುಂದೆ ಬಂದಿಲ್ಲ. ಈತನ ವಂಚನೆಯ ಶೈಲಿಯು ರಣವೀರ್ ಸಿಂಗ್ ಅಭಿನಯದ ಬಾಲಿವುಡ್‌ನ ‘ಲೇಡೀಸ್ ವರ್ಸಸ್ ರಿಕಿ ಭಾಲ್’ ಸಿನಿಮಾವನ್ನು ನೆನಪಿಸುವಂತಿದೆ.
ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಹೊರಗೆ ಸುತ್ತಾಡಲು ಕರೆದೊಯ್ಯುವಾಗ ಆರೋಪಿಯು ತಲಾ ಎಂಟು ಗಂಟೆಗಳ ಲೆಕ್ಕದಲ್ಲಿ ದುಬಾರಿ ಕಾರುಗಳನ್ನು ಬಾಡಿಗೆಗೆ ಪಡೆಯುತ್ತಿದ್ದ. ಒಬ್ಬರನ್ನು ಕರೆದೊಯ್ದ ಕಾರಿನಲ್ಲೇ ಮತ್ತೊಬ್ಬರನ್ನೂ ಕರೆದೊಯ್ಯುತ್ತಿದ್ದ ಆತ, ತಾನೊಬ್ಬ ಶ್ರೀಮಂತ ಉದ್ಯಮಿ ಎಂಬ ಭ್ರಮೆ ಹುಟ್ಟಿಸುತ್ತಿದ್ದ. ಅಚ್ಚರಿಯೆಂದರೆ, ಒಬ್ಬ ಮಹಿಳಾ ಕಾನ್‌ಸ್ಟೆಬಲ್‌ನಿಂದ ಹಣ ಪಡೆದು, ಆ ಹಣದಲ್ಲೇ ಮತ್ತೊಬ್ಬ ಮಹಿಳಾ ಕಾನ್‌ಸ್ಟೆಬಲ್ ಅನ್ನು ಸುತ್ತಾಡಲು ಕರೆದೊಯ್ಯುತ್ತಿದ್ದ! ಈ ವಂಚನೆಯಿಂದ ಬಂದ ಹಣವನ್ನು ಆತ ‘ಒನ್‌ಎಕ್ಸ್’ (OneX) ಬೆಟ್ಟಿಂಗ್ ಆ್ಯಪ್ ವಹಿವಾಟಿಗೆ ಬಳಸಿಕೊಂಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಆರೋಪಿ ವಿಕ್ರಾಂತ್ ತೋಮರ್ ವಿರುದ್ಧ ದೆಹಲಿಯಲ್ಲಿ ಈಗಾಗಲೇ ಇದೇ ಮಾದರಿಯ ವಂಚನೆಗೆ ಸಂಬಂಧಿಸಿದಂತೆ ಐದು ಎಫ್‌ಐಆರ್‌ಗಳು ದಾಖಲಾಗಿವೆ. ಮಾಯಾಪುರಿ, ಹರಿ ನಗರ ಮತ್ತು ಇಂದರ್‌ಪುರಿ ಪೊಲೀಸ್ ಠಾಣೆಗಳ ಜೊತೆಗೆ ಪೂರ್ವ ಜಿಲ್ಲಾ ಸೈಬರ್ ಪೊಲೀಸ್ ಠಾಣೆಯಲ್ಲೂ ಆತನ ವಿರುದ್ಧ ಪ್ರಕರಣಗಳಿವೆ. ಕಳೆದ ಜೂನ್ ತಿಂಗಳಷ್ಟೇ ಆತ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಪ್ರಸ್ತುತ ನಡೆಯುತ್ತಿರುವ ತನಿಖೆಯ ಭಾಗವಾಗಿ ಕೇಂದ್ರ ಜಿಲ್ಲಾ ಸೈಬರ್ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.





