ಹಿಮಾಚಲ ಪ್ರದೇಶದ ಲಾಹಾಲ್-ಸ್ಪಿಟಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಟ್ಯಾಕ್ಸಿ ವಾಹನವೊಂದು ಸಿಲುಕಿ ಕನಿಷ್ಠ 13 ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಕುಲ್ಲು ಪ್ರದೇಶದಿಂದ ಪಾಂಗಿಗೆ ತೆರಳುತ್ತಿದ್ದ ಟಾಟಾ ಸುಮೊ ವಾಹನದ ಮೇಲೆ ಬೃಹತ್ ಗಾತ್ರದ ಬಂಡೆಗಳು ಮತ್ತು ಮಣ್ಣಿನ ರಾಶಿ ಕುಸಿದು ಬಿದ್ದಿದ್ದರಿಂದ ಈ ದಾರುಣ ಅಪಘಾತ ಸಂಭವಿಸಿದೆ.
ಲಾಹಾಲ್-ಸ್ಪಿಟಿ ಜಿಲ್ಲೆಯ ಉದಯಪುರ-ಕಿಲ್ಲಾರ್ ಮಾರ್ಗದ ಕಹು-ದು ನಾಲಾ ಬಳಿ ಈ ಘಟನೆ ನಡೆದಿದೆ. ಹಠಾತ್ತಾಗಿ ಗುಡ್ಡ ಕುಸಿದು ವಾಹನದ ಮೇಲೆ ಬಿದ್ದ ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಮೃತಪಟ್ಟ ವಾಹನದ ಚಾಲಕನನ್ನು ಬೀರ್ ಸಿಂಗ್ ಎಂದು ಗುರುತಿಸಲಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ತಿಂಡಿ ಪೊಲೀಸ್ ಠಾಣೆಯ ಸಿಬ್ಬಂದಿ, ಸ್ಥಳೀಯ ಆಡಳಿತ ಮತ್ತು ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಒಬ್ಬ ವ್ಯಕ್ತಿಯನ್ನು ರಕ್ಷಿಸಲಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಳೆ ಹಾಗೂ ಗುರುವಾರ ಸಂಭವಿಸಿದ್ದ ಮತ್ತೊಂದು ಭೂಕುಸಿತದ ಕಾರಣದಿಂದಾಗಿ ಉದಯಪುರ-ಕಿಲ್ಲಾರ್ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ಪ್ರಯಾಣಿಕರು ತಿಂಡಿ ಪ್ರದೇಶದಲ್ಲೇ ತಂಗಿದ್ದರು. ಶುಕ್ರವಾರ ರಸ್ತೆ ಸುಗಮಗೊಂಡ ನಂತರ ವಾಹನವು ಪಾಂಗಿಯತ್ತ ಹೊರಟಾಗ ಈ ದುರಂತ ಸಂಭವಿಸಿದೆ.ಪ್ರಸ್ತುತ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳು ಮುಂದುವರಿದಿದ್ದು, ಪರಿಸ್ಥಿತಿಯನ್ನು ಜಿಲ್ಲಾಡಳಿತ ಹಾಗೂ ಪೊಲೀಸರು ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.





