ಪರೀಕ್ಷಾ ಅಕ್ರಮಗಳು ಮತ್ತು ಸರಣಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಯುವಜನರು ಮತ್ತು ವಿದ್ಯಾರ್ಥಿಗಳು ಒಂದು ತಿಂಗಳಿನಿಂದ ಹೋರಾಟ ನಡೆಸುತ್ತಿದ್ದಾರೆ. ಈ ಸುದೀರ್ಘ ಬೃಹತ್ ಹೋರಾಟದ ವಿಚಾರವಾಗಿ ಪ್ರಧಾನಿ ಮೋದಿ ಕೊನೆಗೂ ಮೌನ ಮುರಿದಿದ್ದಾರೆ. ಗುರುವಾರ (ಜುಲೈ 23) ನಡುರಾತ್ರಿಯಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ. ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶೀಘ್ರ ಮತ್ತು ಕಠಿಣ ಶಿಕ್ಷೆ ಖಾತರಿಪಡಿಸಲು ‘ಫಾಸ್ಟ್ ಟ್ರ್ಯಾಕ್’ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ. “ನಮ್ಮ ಯುವಜನತೆಯ ಕಲ್ಯಾಣ ಮತ್ತು ಭವಿಷ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ, ಅವರ ಭವಿಷ್ಯಕ್ಕೆ ಧಕ್ಕೆ ತರುವವರನ್ನು ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ಮೋದಿ ತಮ್ಮ ವಿಡಿಯೋದಲ್ಲಿ ನೀಡಿರುವ ಹೇಳಿಕೆಯಲ್ಲಿ; ‘ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆ’ಯ ಭರವಸೆ ಹೊರತುಪಡಿಸಿ, ಹೊಸದೇನೂ ಅಲ್ಲ. ಕಳೆದ ಕೆಲವು ವರ್ಷಗಳಲ್ಲಿ ಸಂಸತ್ತಿನ ಒಳಗೆ ಮತ್ತು ಚುನಾವಣಾ ಪ್ರಚಾರದ ವೇಳೆ ಅವರು ವಿದ್ಯಾರ್ಥಿಗಳಿಗೆ ನೀಡಿದ್ದ ಅದೇ ಹಳೆಯ ಭರವಸೆಗಳನ್ನು ಮತ್ತೆ ಪುನರಾವರ್ತಿಸಿದ್ದಾರೆ. ಅದರ ಹೊರತಾಗಿ, ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳ ಹೋರಾಟ, ಶಿಕ್ಷಣ ಸಚಿವರ ರಾಜೀನಾಮೆ ಬೇಡಿಕೆ ಅಥವಾ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ಕುರಿತು ಮೋದಿ ತಮ್ಮ ಹೇಳಿಕೆಯಲ್ಲಿ ಪ್ರಸ್ತಾಪಿಸಿಲ್ಲ. ಕ್ಷಮೆಯಾಚಿಸುವುದಿರಲಿ, ಕನಿಷ್ಠ ಬೇಸರವನ್ನೂ ವ್ಯಕ್ತಪಡಿಸಿಲ್ಲ.
ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಇದೇ ವಿಷಯವಾಗಿ ನೀಡಿರುವ ಪ್ರಮುಖ ಹೇಳಿಕೆಗಳ ವಿವರ ಇಲ್ಲಿದೆ:
2024ರ ಜುಲೈ
ಕೇವಲ ಎರಡು ವರ್ಷಗಳ ಹಿಂದೆ, ಅಂದರೆ 2024ರ ಜುಲೈ 2ರಂದು, ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಿ ಮೋದಿ ಮಾತನಾಡಿದ್ದರು. ಆಗಲೂ ಇದೇ ರೀತಿಯ ಪದಗಳನ್ನು ಬಳಸಿ ಭರವಸೆ ನೀಡಿದ್ದರು. “ಯುವಜನತೆಗೆ ವಂಚಿಸಿದವರನ್ನು ತಮ್ಮ ಸರ್ಕಾರ ಬಿಡುವುದಿಲ್ಲ. ಪರೀಕ್ಷಾ ಸೋರಿಕೆ ತಡೆಯಲು ಸರ್ಕಾರ ಅತ್ಯಂತ ಗಂಭೀರವಾಗಿದೆ. ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ” ಎಂದು ಹೇಳಿದ್ದರು.
ಮರುದಿನ ಜುಲೈ 3 ರಂದು ರಾಜ್ಯಸಭೆಯಲ್ಲೂ ಮಾತನಾಡಿ, “ಅಕ್ರಮ ಎಸಗಿದವರಿಗೆ ಕಠಿಣ ಶಿಕ್ಷೆಯಾಗುವಂತೆ ಸರಣಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಂಸತ್ತಿನಲ್ಲಿ ಕಠಿಣ ಕಾನೂನು ರೂಪಿಸಲಾಗಿದೆ” ಎಂದು ತಿಳಿಸಿದ್ದರು.
ಆ ವರ್ಷ, ಮೇ 5ರಂದು ನೀಟ್-ಯುಜಿ ಪರೀಕ್ಷೆಯಲ್ಲಿ ಅಕ್ರಮ ನಡೆದಿವೆ ಎಂದು ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಜೂನ್ 18ರಂದು ಮರು-ಪರೀಕ್ಷೆ ನಡೆದಿತ್ತು. ಅದರಲ್ಲೂ ಸಮಸ್ಯೆ ಎದುರಾಗಿ, ಜೂನ್ 23ರಂದು ಅಂತಿಮವಾಗಿ ಪರೀಕ್ಷೆ ನಡೆದಿತ್ತು.
2024ರ ಫೆಬ್ರವರಿ:
17ನೇ ಲೋಕಸಭೆಯ ಕೊನೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, “ಪ್ರಶ್ನೆಪತ್ರಿಕೆ ಸೋರಿಕೆಯಿಂದ ಯುವಜನರು ವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡಿದ್ದರು. ಹೀಗಾಗಿ, ತಮ್ಮ ಸರ್ಕಾರವು ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ವಿಧೇಯಕ-2024’ಅನ್ನು ಸಂಸತ್ತಿನಲ್ಲಿ ಅಂಗೀಕರಿಸುವ ಮೂಲಕ ಕಠಿಣ ಕಾನೂನು ತಂದಿದೆ” ಎಂದು ಪ್ರತಿಪಾದಿಸಿದ್ದರು.
2024ರ ಡಿಸೆಂಬರ್:
ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮೋದಿ ಮಾತನಾಡಿದ್ದರು. “ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಾಜಸ್ಥಾನಕ್ಕೆ ‘ಪೇಪರ್ ಲೀಕ್’ ಗುರುತಾಗಿ ಪರಿಣಮಿಸಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ತನಿಖೆ ನಡೆಸಿ ಅನೇಕ ತಪ್ಪಿತಸ್ಥರನ್ನು ಬಂಧಿಸಿದೆ” ಎಂದು ಹೇಳಿದ್ದರು.
2023ರ ನವೆಂಬರ್:
ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಚಾರ ನಡೆಸುತ್ತಿದ್ದ ಮೋದಿ, “ಕಾಂಗ್ರೆಸ್ ಪಕ್ಷವು ರಾಜಸ್ಥಾನದಲ್ಲಿ ಪರೀಕ್ಷಾ ಪತ್ರಿಕೆಗಳನ್ನು ಮಾರಾಟ ಮಾಡಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಜೈಲಿಗೆ ಅಟ್ಟಲಾಗುವುದು, ಇದು ‘ಮೋದಿ ಗ್ಯಾರಂಟಿ’ಯಾಗಿದೆ” ಎಂದು ಭರವಸೆ ನೀಡಿದ್ದರು.
ಅದಕ್ಕೂ ಮುನ್ನ, 2023ರ ಅಕ್ಟೋಬರ್ 5 ರಂದು ಸಹ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಮೋದಿ, ಕಾಂಗ್ರೆಸ್ ಬೆಳೆಸಿದ ಪೇಪರ್ ಲೀಕ್ ಮಾಫಿಯಾವನ್ನು ಹೊಸ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಾಶಮಾಡಲಿದೆ ಎಂದು ಹೇಳಿದ್ದರು.




