ಹರಿಯಾಣ ವಿಧಾನಸಭೆ ಚುನಾವಣಾ ಫಲಿತಾಂಶ ಬಂದ ಒಂದು ದಿನದ ಬಳಿಕ, “ಹರಿಯಾಣದಲ್ಲಿ ಬಿಎಸ್‌ಪಿ ಸೋಲಿಗೆ ಜಾಟ್ ಸಮುದಾಯದ ‘ಜಾತಿವಾದಿ ಮನಸ್ಥಿತಿಯೇ ಕಾರಣ” ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ. ಜೊತೆಗೆ ಜಾಟ್ ಸಮುದಾಯ ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದೇ ಬಿಎಸ್‌ಪಿ ಸೋಲಿಗೆ ಕಾರಣ ಎಂದಿದ್ದಾರೆ.
ಹರಿಯಾಣದಲ್ಲಿ ಬಿಎಸ್‌ಪಿ ಭಾರತೀಯ ರಾಷ್ಟ್ರೀಯ ಲೋಕದಳದೊಂದಿಗೆ (ಐಎನ್‌ಎಲ್‌ಡಿ) ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದೆ. ಐಎನ್‌ಎಲ್‌ಡಿ ಒಟ್ಟಾಗಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ದಬ್ವಾಲಿ ಮತ್ತು ರಾನಿಯಾ ಎಂಬ ಎರಡು ಸ್ಥಾನಗಳಲ್ಲಿ ಗೆದ್ದು ಶೇಕಡ 4.14 ಮತಗಳನ್ನು ಪಡೆದಿದೆ. ಬಿಎಸ್‌ಪಿ ಕೇವಲ ಶೇಕಡ 1.82ರಷ್ಟು ಮತಗಳನ್ನು ಪಡೆದಿದೆ. ಆದರೆ ಯಾವುದೇ ಕ್ಷೇತ್ರದಲ್ಲೂ ಜಯಗಳಿಸಿಲ್ಲ.
ಈ ಬಗ್ಗೆ ಬುಧವಾರ ನವದೆಹಲಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ, ಹರಿಯಾಣದ ಜಾಟ್ ಸಮುದಾಯವು ರಾಜ್ಯ ಮತ್ತು ಕೇಂದ್ರದಲ್ಲಿ ತನ್ನ ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದೆ. ಅದರಿಂದಾಗಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಹೆಚ್ಚಿನ ಜಾಟ್‌ಗಳು ಕಾಂಗ್ರೆಸ್‌ಗೆ ಮತ ಹಾಕಿದರು. ಜಾಟ್‌ಗಳು ಬೇರೆ ಬೇರೆ ಮೈತ್ರಿಗಳಿಗೆ ಮತ ವಿಭಜನೆಯಾಗದಂತೆ ನೋಡಿಕೊಂಡರು. ಐಎನ್‌ಎಲ್‌ಡಿ-ಬಿಎಸ್‌ಪಿ ಮೈತ್ರಿಕೂಟವೂ ಕೂಡಾ ಜಾಟ್ ಸಮುದಾಯದ ಮತವನ್ನು ಅತೀ ಕಡಿಮೆ ಪಡೆದಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬಿಎಸ್‌ಪಿ ರಾಷ್ಟ್ರ ಘಟಕದ ಅಧ್ಯಕ್ಷೆಯಾಗಿ ಮಾಯಾವತಿ ಮರು ಆಯ್ಕೆ
“ಜಾಟ್ ಸಮುದಾಯದ ಜಾತಿವಾದಿ ಮನಸ್ಥಿತಿಯಿಂದಾಗಿ ಬಿಎಸ್‌ಪಿ ಅಭ್ಯರ್ಥಿಗಳು ಜಾಟ್‌ಗಳ ಮತಗಳನ್ನು ಪಡೆದಿಲ್ಲ. ಮತ್ತೊಂದೆಡೆ, ಬಿಎಸ್‌ಪಿಯ ದಲಿತ ಮತಗಳು ಸಂಪೂರ್ಣವಾಗಿ ಐಎನ್‌ಎಲ್‌ಡಿ ಅಭ್ಯರ್ಥಿಗಳಿಗೆ ವರ್ಗಾವಣೆಯಾಗಿದೆ. ಐಎನ್‌ಎಲ್‌ಡಿಯಲ್ಲಿನ ಚೌತಾಲ ಕುಟುಂಬದ ಬಿರುಕಿನಿಂದ ಜಾಟ್ ಮತಗಳು ಕಾಂಗ್ರೆಸ್‌ಗೆ ಹೋಗಿದೆ” ಎಂದು ಹೇಳಿದರು.
1. हरियाणा विधानसभा आमचुनाव बीएसपी व इनेलो ने गठबंधन करके लड़ा किन्तु आज आए परिणाम से स्पष्ट है कि जाट समाज के जातिवादी लोगों ने बीएसपी को वोट नहीं दिया जिससे बीएसपी के उम्मीदवार कुछ सीटों पर थोड़े वोटों के अन्तर से हार गए, हालांकि बीएसपी का पूरा वोट ट्रांस्फर हुआ। 1/3
— Mayawati (@Mayawati) October 8, 2024
ಹರಿಯಾಣದಲ್ಲಿ ಜಾಟ್‌ಗಳು ಮತ್ತು ಜಾಟೇತರರ ನಡುವೆ ಚುನಾವಣೆ ನಡೆದಂತಾಗಿದೆ. ಇದು ಬಿಎಸ್‌ಪಿಗೆ ಹಾನಿ ಮಾಡಿದೆ, ಬಿಜೆಪಿ ಲಾಭ ನೀಡಿದೆ. ನಾವು ಐಎನ್‌ಎಲ್‌ಡಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಆದರೆ ನಮಗೆ ಜಾಟ್ ಮತಗಳು ಬರಲಿಲ್ಲ. ಅವರು ಕಾಂಗ್ರೆಸ್‌ಗೆ ಮತ ಹಾಕಿದರು. ಬಿಎಸ್‌ಪಿಗೆ ದಲಿತರ ಮತಗಳು ಮಾತ್ರ ಲಭಿಸಿದೆ. ಜಾಟ್‌ಗಳ ಶೇಕಡ 2-3ರಷ್ಟು ಮತಗಳನ್ನು ನಾವು ಪಡೆದಿದ್ದರೂ ಕೂಡಾ ಗೆಲ್ಲಬಹುದಿತ್ತು” ಎಂದು ಮಾಯಾವತಿ ಅಭಿಪ್ರಾಯಿಸಿದ್ದಾರೆ.
ಹರಿಯಾಣದಲ್ಲಿ ನಿನ್ನೆ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆದಿದೆ. ಬಿಜೆಪಿ 48 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ 37 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.
