ಮಹಾರಾಷ್ಟ್ರದಲ್ಲಿ ಅಕ್ರಮ ಪಟಾಕಿ ಅಂಗಡಿಗಳ ಮೇಲೆ ಅಧಿಕಾರಿಗಳು ‘ನೀರಿನ ದಾಳಿ’ ನಡೆಸಿದ್ದು ಪಟಾಕಿಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಅಕ್ರಮವಾಗಿ ತಲೆ ಎತ್ತಿರುವ ಪಟಾಕಿ ಮಾರಾಟ ಮಳಿಗೆಗಳ ವಿರುದ್ಧ ಕಠಿಣ ನಿಲುವು ತಳೆದಿರುವ ಮೀರಾ ಭಯಂದರ್ ಮುನ್ಸಿಪಲ್ ಕಾರ್ಪೊರೇಷನ್ (ಎಂಬಿಎಂಸಿ) ತನ್ನ ಅಗ್ನಿಶಾಮಕ ಮತ್ತು ತುರ್ತು ವಿಭಾಗವನ್ನು ಬಳಸಿಕೊಂಡು ಅಕ್ರಮ ಪಟಾಕಿ ದಾಸ್ತಾನುಗಳಿಗೆ ನೀರು ನಿಂಪಡಿಸಿದೆ.
ಭಾನುವಾರ ಎಂಬಿಎಂಸಿ ಅಧಿಕಾರಿಗಳು ದಾಳಿ ನಡೆಸಿದ್ದು ಈ ವೇಳೆ ಹದಿನೆಂಟು ಸ್ಟಾಲ್‌ಗಳ ವಿರುದ್ಧ ಕಾನೂನುಬಾಹಿರ ಅಥವಾ 1884 ರ ಭಾರತೀಯ ಸ್ಫೋಟಕ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಕಡ್ಡಾಯವಾದ ಮಾನದಂಡಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ.
ಏಳು ಅಂಗಡಿಗಳಲ್ಲಿ ಪಟಾಕಿ ಮೇಲೆ ನೀರು ಎರಚಿದರೆ, ನಾಲ್ಕು ಅಕ್ರಮ ಅಂಗಡಿಗಳ ಸಂಪೂರ್ಣ ದಾಸ್ತಾನು ವಶಪಡಿಸಿಕೊಂಡು ಆಳವಾದ ಗುಂಡಿಯಲ್ಲಿ ಹೂಳಲಾಗಿದೆ. ಇನ್ನು ಏಳು ಅಂಗಡಿಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ದೀಪಾವಳಿ | ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿ: ಸಿಎಂ ಸಿದ್ದರಾಮಯ್ಯ ಸೂಚನೆ
“ಜನರ ಸುರಕ್ಷತೆಗೆ ಅಡ್ಡಿ ಉಂಟು ಮಾಡುವ ಇಂತಹ ಅಕ್ರಮಗಳನ್ನು ಸಹಿಸಲಾಗುವುದಿಲ್ಲ. ಇಬ್ಬರು ಠಾಣಾಧಿಕಾರಿಗಳ ನೇತೃತ್ವದಲ್ಲಿ 29 ಅಗ್ನಿಶಾಮಕ ಸಿಬ್ಬಂದಿಯ ತಂಡವನ್ನು ನಿಯೋಜಿಸಿದ್ದೇವೆ. ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳ ಮೇಲೆ ಕಣ್ಣಿಡಲು ಮತ್ತು ತಕ್ಷಣ ಕ್ರಮ ಕೈಗೊಳ್ಳಳು ನಾವು ನಿರ್ಧರಿಸಿದ್ದೇವೆ” ಎಂದು ಪುರಸಭೆಯ ಆಯುಕ್ತ ಸಂಜಯ್ ಕಾಟ್ಕರ್ ಹೇಳಿದರು.
ವಿಡಿಯೋ ಬಗ್ಗೆ ನೆಟ್ಟಿಗರ ಪ್ರತಿಕ್ರಿಯೆ
ಸದ್ಯ ಅಕ್ರಮ ಪಟಾಕಿ ಅಂಗಡಿಗಳ ಮೇಲೆ ಅಧಿಕಾರಿಗಳು ನೀರಿನ ದಾಳಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಧಿಕಾರಿಗಳ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ನೆಟ್ಟಿಗರು ಇದು ಉತ್ತಮ ಕ್ರಮ ಎಂದು ಹೇಳಿದರೆ, ಇನ್ನು ಕೆಲವು ನೆಟ್ಟಿಗರು ಎಷ್ಟೊಂದು ನಷ್ಟ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರೊಬ್ಬರು ಇದು ಸುಮ್ನನೆ ಪಟಾಕಿ ಉತ್ಪನ್ನಗಳನ್ನು ನಷ್ಟ ಮಾಡಿದಂತಲ್ಲವೇ? ಪಟಾಕಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದಾದರೆ ಆ ಪಟಾಕಿಗಳನ್ನು ವಶಕ್ಕೆ ಪಡೆದು ಆಯಾ ಕಂಪನಿಗಳಿಗೆ ವಾಪಾಸ್ ಕೊಡಬಹುದು ಅಲ್ಲವೇ? ಎಂದು ನೆಟ್ಟಿಗರೊಬ್ಬರು ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ತುಮಕೂರು | ಹೆಚ್ಚು ಶಬ್ದ ಮಾಡುವ ಪಟಾಕಿಗಳ ನಿಷೇಧ : ಜಿಲ್ಲಾಧಿಕಾರಿ
ಮತ್ತೋರ್ವರು “ನೀವು ಹೀಗೆ ಬಡ ವ್ಯಾಪಾರಿಗಳ ಹೊಟ್ಟೆಗ ಹೊಡೆಯುತ್ತೀರಿ. ನಿಯಮಗಳನ್ನು ಸರಿಯಾಗಿ ತಿಳಿಸಿ, ದಂಡ ವಿಧಿಸಿ. ನಿಯಮ ಪ್ರಕಾರ ಪಟಾಕಿ ವ್ಯಾಪಾರಕ್ಕೆ ಸಣ್ಣ ವ್ಯಾಪಾರಿಗಳಿಗೆ ಅವಕಾಶ ನೀಡಿ. ನಿಮಗೆ ಸಾಧ್ಯವಾದರೆ ಅಕ್ರಮವಾಗಿ ಪಟಾಕಿಗಳನ್ನು ಉತ್ಪಾದಿಸುವ ದೊಡ್ಡ ವ್ಯಾಪಾರಿಗಳನ್ನು ಎದುರಿಸಿ” ಎಂದು ಸವಾಲೆಸೆದಿದ್ದಾರೆ.
ಇನ್ನೋರ್ವ ನೆಟ್ಟಿಗರು, “ಪಟಾಕಿ ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ. ಈಗಾಗಲೇ ನಮ್ಮ ದೇಶದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಆದ್ದರಿಂದ ಪಟಾಕಿ ನಿಷೇಧಿಸಬೇಕು, ಪಟಾಕಿ ಆಮದಿಗೆ ತಡೆಯೊಡ್ಡಬೇಕು” ಎಂದು ಆಗ್ರಹಿಸಿದ್ದಾರೆ.
