ಮೈತೇಯಿ ಸಂಘಟನೆಯ ನಾಯಕ ಮತ್ತು ಇತರ ನಾಲ್ವರ ಬಂಧನವನ್ನು ವಿರೋಧಿಸಿ ಮಣಿಪುರದಲ್ಲಿ ಪ್ರತಿಭಟನೆಗಳು ಮುಂದುವರೆದಿದೆ. ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರೂ ಪ್ರತಿಭಟನಾಕಾರರು ರಾತ್ರಿಯಿಡೀ ಪಂಜಿನ ಮೆರವಣಿಗೆಗಳನ್ನು ನಡೆಸಿದರು. ಸರ್ಕಾರಿ ಕಟ್ಟಡವನ್ನು ಸುಟ್ಟುಹಾಕಿದ್ದು, ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆದಿದೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಕ್ವಾಕಿಥೆಲ್ ಮತ್ತು ಸಿಂಗ್ಜಮೈನಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ನಡೆದಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹಲವು ಸುತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ, ರಬ್ಬರ್ ಗುಂಡು ಹಾರಿಸಿದ್ದಾರೆ ಎಂದು ಸೋಮವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಐದು ದಿನ ಇಂಟರ್‌ನೆಟ್ ಸ್ಥಗಿತ
ಇಂಫಾಲ್ ಪೂರ್ವ ಜಿಲ್ಲೆಯ ಯೈರಿಪೋಕ್ ತುಲಿಹಾಲ್‌ನಲ್ಲಿರುವ ಉಪ-ವಿಭಾಗೀಯ ಕಲೆಕ್ಟರ್(ಎಸ್‌ಡಿಸಿ) ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಕಟ್ಟಡ ಭಾಗಶಃ ಹಾನಿಗೊಳಗಾಗಿದೆ. ಅಧಿಕೃತ ದಾಖಲೆಗಳು ನಾಶವಾಗಿವೆ. ತನಿಖೆ ಆರಂಭಿಸಲಾಗಿದೆ. ಅಹಿತಕರ ಘಟನೆಗಳನ್ನು ತಡೆಗಟ್ಟಲು ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಸೆಕ್ಮೈ ಮತ್ತು ಕೊಯಿರೆಂಗೈ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಸಂಚಾರ ಮಾಡುವುದಕ್ಕೆ ತೊಂದರೆ ಉಂಟು ಮಾಡುವ ಉದ್ದೇಶದಿಂದ ಪ್ರತಿಭಟನಾಕಾರರು ರಸ್ತೆಗಳಲ್ಲಿ ಮಣ್ಣಿನ ದಿಬ್ಬಗಳನ್ನು ಹಾಕಿರುವುದು ಕಂಡುಬಂದಿದೆ. ಇಂಫಾಲ್ ಪೂರ್ವ ಜಿಲ್ಲೆಯ ವಾಂಗ್ಖೈ, ಯೈರಿಪೋಕ್ ಮತ್ತು ಖುರೈನಲ್ಲಿ ರಸ್ತೆಗಳ ಮಧ್ಯದಲ್ಲಿ ಟೈರ್‌ಗಳನ್ನು ಸುಟ್ಟು ಹಾಕಲಾಗಿದ್ದು, ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆದಿದೆ. ಇಲ್ಲಿಯೂ ಅಶ್ರುವಾಯು ಪ್ರಯೋಗಿಸಲಾಗಿದೆ.
VIDEO | All major roads leading to Imphal in Manipur's valley district blocked with debris as the protest continues over the arrests of Meitei outfit leaders.
— Press Trust of India (@PTI_News) June 9, 2025
(Full video available on PTI Videos- https://t.co/dv5TRAShcC) pic.twitter.com/CRi0xx07te
ಇನ್ನು ಮಹಿಳೆಯರ ಗುಂಪುಗಳೂ ಪ್ರತಿಭಟನೆಯಲ್ಲಿ ಭಾಗಿಯಾಗಿದೆ. ಖುರೈನಲ್ಲಿ ಪ್ರತ್ಯೇಕವಾಗಿ ಪಂಜಿನ ಮೆರವಣಿಗೆ ನಡೆಸಿದೆ. ಸದ್ಯ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ರಾಜ್ಯದಲ್ಲಿ ತಕ್ಷಣ ಸರ್ಕಾರ ರಚನೆಯಾಗಬೇಕು ಎಂದು ಮಹಿಳೆಯರ ಗುಂಪು ಆಗ್ರಹಿಸಿದೆ.
2023ರ ಮೇ ತಿಂಗಳಿನಿಂದ ಮಣಿಪುರದಲ್ಲಿ ನಿರಂತರವಾಗಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಮೈತೇಯಿ ಮತ್ತು ಕುಕಿ ಜನಾಂಗದ ನಡುವೆ ನಡೆದ ಈ ಹಿಂಸಾಚಾರದಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಿಂಸಾಚಾರವನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರ ವಿಫಲವಾಗುತ್ತಿದ್ದಂತೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಅದಾದ ಬಳಿಕ ಕೇಂದ್ರ ಸರ್ಕಾರವು ಫೆಬ್ರವರಿ 13ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದೆ. 2027ರವರೆಗೆ ಅಧಿಕಾರಾವಧಿ ಹೊಂದಿರುವ ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಲಾಗಿದೆ.
ಸದ್ಯ 2023ರಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಹಲವು ಅಪರಾಧದಲ್ಲಿ ಭಾಗಿಯಾದ ಆರೋಪದಲ್ಲಿ ಮೈತೇಯಿ ಸಂಘಟನೆ ಅರಾಂಬೈ ಟೆಂಗೋಲ್‌ನ ನಾಯಕ ಕಾನನ್ ಸಿಂಗ್ ಮತ್ತು ಇತರ ನಾಲ್ವರನ್ನು ಬಂಧಿಸಲಾಗಿದೆ. ಈ ಬಂಧನ ಖಂಡಿಸಿ ಮಣಿಪುರದಾದ್ಯಂತ ಶನಿವಾರದಿಂದ ಪ್ರತಿಭಟನೆ, ಹಿಂಸಾಚಾರಗಳು ಭುಗಿಲೆದ್ದಿದೆ.
