ಮುಟ್ಟಿನ ಸಮಯದಲ್ಲಿ ತನ್ನ ಗಂಡನ ಮನೆಯವರು ಹೇರುತ್ತಿದ್ದ ಹತ್ತಾರು ರೀತಿಯ ಕಟ್ಟುಪಾಡುಗಳಿಂದ ಬೇಸತ್ತ ಮಹಿಳೆಯೊಬ್ಬರು ಗಂಡನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಮಧ್ಯಪ್ರದೇಶದ ಬೋಪಾಲ್‌ನಲ್ಲಿ ನೆಲೆಸಿರುವ 30 ವರ್ಷದ ಮಹಿಳೆ ತನ್ನ ಗಂಡನಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತಮಗೆ ಮುಟ್ಟಾದ ಸಮಯದಲ್ಲಿ ಕೊಠಡಿಯಲ್ಲೇ ಇರಬೇಕು, ಯಾವ ಕಾರಣಕ್ಕೂ ಸ್ನಾನ ಮಾಡಬಾರದು, ಯಾರನ್ನು ಮುಟ್ಟಿಸಿಕೊಳ್ಳಬಾರದು, ಅಡುಗೆ ಮನೆ ಸೇರಿದಂತೆ ಮನೆ ಇತರ ಭಾಗಗಳಿಗೆ ತೆರಳಬಾರದು, ತಮಗೆ ನೀಡಲಾದ ಪಾತ್ರೆಗಳಲ್ಲದೆ ಬೇರಾವುದೇ ಪಾತ್ರೆಗಳನ್ನು ಮಟ್ಟಬಾರದೆಂಬ ಹಲವಾರು ಕಡ್ಡುಪಾಡುಗಳನ್ನು ಗಂಡನ ಮನೆಯವರು ತನ್ನ ಮೇಲೆ ಹೇರುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇಂತಹ ಮೌಢ್ಯಗಳನ್ನು ಪಾಲಿಸುವಂತೆ ತಮ್ಮ ಪತಿಯೂ ಒತ್ತಾಯಿಸುತ್ತಿದ್ದಾರೆ. ಇಂತಹ ಮೂಢನಂಬಿಕೆಗಳಿಂದ ಹೊರ ಬರಬೇಕೆಂದು ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವರು ಹೇರುವ ಕಟ್ಟುಪಾಡುಗಳು ಮಾನಸಿಕವಾಗಿ ಹಿಂಸೆ ನೀಡುತ್ತಿವೆ ಎಂದು ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತನ್ನ ಪತಿ, ಅತ್ತೆ-ಮಾವ ಎಲ್ಲವೂ ಹಳೆಯ ಪದ್ದತಿ, ಸಂಪ್ರದಾಯಗಳನ್ನು ಗಾಢವಾಗಿ ಮೈಗೂಡಿಸಿಕೊಂಡಿದ್ದಾರೆ. ಎಲ್ಲರೂ ಅಂತೆಯೇ ಇರಬೇಕೆಂದು ಬಯಸುತ್ತಾರೆ. ಅವರ ಪದ್ದತಿಗಳು ಬಂಧನದಂತೆ ಬಾಸವಾಗುತ್ತವೆ ಎಂದು ಮಹಿಳೆ ಹೇಳಿದ್ದಾರೆ. ಗಂಡನಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.